
ಪಣಜಿ: ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್ ಎಸ್ಎಸ್ )ನ್ನು ನೋಂದಣಿಯಾಗದ ಸಂಘಟನೆ ಎಂದಿರುವ ಕಾಂಗ್ರೆಸ್ ನ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್, ಗುರುಪೂರ್ಣಿಮೆ ದಿನವೂ ಸೇರಿದಂತೆ ವಾರ್ಷಿಕವಾಗಿ ಸಂಗ್ರಹಿಸುವ ದೇಣಿಗೆ ಬಗ್ಗೆ ಮಾಹಿತಿಯನ್ನು ಬಹಿರಂಗಗೊಳಿಸುವಂತೆ ಆರ್ ಎಸ್ಎಸ್ ನ್ನು ಒತ್ತಾಯಿಸಿದ್ದಾರೆ.
ನೋಂದಣಿಯೇ ಆಗದ ಸಂಘಟನೆಯನ್ನು ನಿಷೇಧಿಸುವ ಪ್ರಶ್ನೆ ಉದ್ಭವಿಸುವುದಿಲ್ಲ. ಹಲವು ಬಾರಿ ನೀವು ಆರ್ ಎಸ್ ಎಸ್ ಸಂಘಟನೆಯನ್ನು ನಿಷೇಧಿಸುವ ಬಗ್ಗೆ ಪ್ರಶ್ನೆ ಮಾಡುತ್ತೀರಿ, ಆರ್ ಎಸ್ ಎಸ್ ನೋಂದಣಿಯೇ ಆಗದ ಸಂಘಟನೆ ಎಂಬುದು ನಿಮಗೆ ತಿಳಿದಿದೆ ಎಂದು ಪಣಜಿಯಲ್ಲಿ ದಿಗ್ವಿಜಯ್ ಸಿಂಗ್ ಪತ್ರಕರ್ತರಿಗೆ ತಿಳಿಸಿದ್ದಾರೆ.
ಗುರುಪೂರ್ಣಿಮೆಯಂದು ಆರ್ ಎಸ್ಎಸ್ ಬೃಹತ್ ಮೊತ್ತದ ಹಣವನ್ನು ಸಂಗ್ರಹಿಸುತ್ತದೆ. ಆದರೆ ಅದ್ಯಾವುದಕ್ಕೂ ಲೆಕ್ಕ ಸಿಗುವುದಿಲ್ಲ ಎಂದು ದಿಗ್ವಿಜಯ್ ಸಿಂಗ್ ಆರೋಪಿಸಿದ್ದಾರೆ. ಆರ್ ಎಸ್ ಎಸ್ ಗೆ ದೂರು ದಕ್ಷಿಣೆ ರೂಪದಲ್ಲಿ ಎಷ್ಟು ಹಣ ಸಂದಾಯವಾಗುತ್ತದೆ ಎಂದು ದಿಗ್ವಿಜಯ್ ಸಿಂಗ್ ಪ್ರಶ್ನಿಸಿದ್ದಾರೆ. ನೋಂದಣಿಯಾಗದ ಸಂಘಟನೆಯಾಗಿರುವುದರಿಂದ ಆರ್ ಎಸ್ ಎಸ್ ಯಾವುದೇ ಕಾಯ್ದೆಯ ವ್ಯಾಪ್ತಿಗೂ ಬರುವುದಿಲ್ಲ. ಹಾಗಾದರೆ ಅದಕ್ಕೆ ಸಂದಾಯವಾಗುವ ಹಣ ಎಲ್ಲಿಗೆ ಹೋಗುತ್ತದೆ? ಈ ಬಗ್ಗೆ ಮಾಹಿತಿಯನ್ನು ಆರ್ ಎಸ್ ಎಸ್ ಬಹಿರಂಗಗೊಳಿಸಬೇಕೆಂದು ದಿಗ್ವಿಜಯ್ ಸಿಂಗ್ ಹೇಳಿದ್ದಾರೆ.
Advertisement