ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ವಿರುದ್ಧ ಎಫ್​ಐಆರ್ ದಾಖಲು

14 ವರ್ಷದ ಅತ್ಯಾಚಾರ ಸಂತ್ರಸ್ತ ದಲಿತ ಬಾಲಕಿಯ ಹೆಸರು ಬಹಿರಂಗಪಡಿಸಿದ ಆರೋಪದ ಮೇಲೆ ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ...
ಸ್ವಾತಿ ಮಾಲಿವಾಲ್
ಸ್ವಾತಿ ಮಾಲಿವಾಲ್
ನವದೆಹಲಿ: 14 ವರ್ಷದ ಅತ್ಯಾಚಾರ ಸಂತ್ರಸ್ತ ದಲಿತ ಬಾಲಕಿಯ ಹೆಸರು ಬಹಿರಂಗಪಡಿಸಿದ ಆರೋಪದ ಮೇಲೆ ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಾಲಿವಾಲ್ ಅವರ ವಿರುದ್ಧ ದೆಹಲಿ ಪೊಲೀಸರು ಮಂಗಳವಾರ ಎಫ್​ಐಆರ್ ದಾಖಲಿಸಿದ್ದಾರೆ.
ಉತ್ತರ ದೆಹಲಿಯ ಬುರಾರಿ ಅತ್ಯಾಚಾರ ಸಂತ್ರಸ್ತೆಯ ಹೆಸರು ಬಹಿರಂಗಗೊಳಿಸಿದ ಸ್ವಾತಿ ಮಾಲಿವಾಲ್ ಅವರ ವಿರುದ್ಧ ಐಪಿಸಿ ಸೆಕ್ಷನ್ 228(ಎ)ರಡಿ ನಾವು ಎಫ್ಐಆರ್ ದಾಖಲಿಸಿದ್ದೇವೆ ಎಂದು ದೆಹಲಿ ಹೆಚ್ಚುವರಿ ಪೊಲೀಸ್ ಆಯುಕ್ತ ಅಸ್ಲಮ್ ಖಾನ್ ಅವರು ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ದಲಿತ ಬಾಲಕಿಯನ್ನು ಆಕೆಯ ನೆರೆಮನೆಯಾತ ಅಪಹರಣ ಮಾಡಿ ಅತ್ಯಾಚಾರ ಎಸಗಿದ್ದ. ಕಳೆದ ಡಿಸೆಂಬರ್​ನಲ್ಲೂ ಸಹ ಆತ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದ. ಆ ನಂತರ ಆತನನ್ನು ಬಂಧಿಸಲಾಗಿತ್ತು. ಆದರೆ ಜಾಮೀನಿನ ಮೇಲೆ ಹೊರಬಂದಿದ್ದ ಆರೋಪಿ ಮತ್ತೊಮ್ಮೆ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದ.
ಈ ಪ್ರಕರಣ ಕುರಿತು ದೆಹಲಿ ಮಹಿಳಾ ಆಯೋಗ ಪೊಲೀಸರು ಮತ್ತು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿತ್ತು. ಜತೆಗೆ ಸ್ವಾತಿ ಮಾಲಿವಾಲ್ ಆರೋಪಿಯನ್ನು ಶೀಘ್ರ ಬಂಧಿಸುವಂತೆ ಮತ್ತು ಉನ್ನತ ಮಟ್ಟದ ತನಿಖೆ ನಡೆಸುವಂತೆ ಟ್ವಿಟರ್​ನಲ್ಲಿ ಸಮರ ಸಾರಿದ್ದರು. ಆದರೆ ಅತ್ಯಾಚಾರ ಸಂತ್ರಸ್ತೆಯ ಹೆಸರು ಬಹಿರಂಗಗೊಳಿಸುವ ಮೂಲಕ ಸ್ವಾತಿ ಇಕ್ಕಟ್ಟಿಗೆ ಸಿಲುಕಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com