
ಮುಂಬೈ: ಇತ್ತೀಚೆಗಷ್ಟೇ ಇಸೀಸ್ ಉಗ್ರರ ನಂಟು ಹೊಂದಿರುವ ಆರೋಪದಡಿ ಕೆಲವು ಯುವಕರನ್ನು ಬಂಧಿಸಿದ್ದ ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳ ಇಸೀಸ್ ಉಗ್ರ ಸಂಘಟನೆಯ ಚಟುವಟಿಕೆಗಳನ್ನು ತೋರುವ 270 ಯುಆರ್ ಎಲ್( ವೆಬ್ ವಿಳಾಸ)ವನ್ನು ಪತ್ತೆ ಮಾಡಿದ್ದು ಇವುಗಳನ್ನು ಸ್ಥಗಿತಗೊಳಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದೆ.
ಇಸೀಸ್ ಉಗ್ರ ಸಂಘಟನೆಯ ಚಟುವಟಿಕೆಗಳು ಹಾಗು ಬೋಧನೆಗಳನ್ನು ಈ ಯುಆರ್ ಎಲ್ ಗಳು ಉತ್ತೇಜಿಸುತ್ತಿರುವ ಬಗ್ಗೆ ಮಹಾರಾಷ್ಟ್ರ ಎಟಿಎಸ್ ಕೇಂದ್ರ ಗೃಹ ಇಲಾಖೆಗೆ ಮಾಹಿತಿ ನೀಡಿದ್ದು, ಶೀಘ್ರವೇ ಈ ಬಗ್ಗೆ ಕೇಂದ್ರ ಗೃಹ ಇಲಾಖೆ ಕ್ರಮ ಕೈಗೊಳ್ಳಲಿವೆ ಎಂದು ಎಟಿಎಸ್ ನ ಮುಖ್ಯಸ್ಥ ಅತುಲ್ ಚಂದ್ರ ಕುಲಕರ್ಣಿ ಹೇಳಿದ್ದಾರೆ.
ಮಹಾರಾಷ್ಟ್ರದ ಭಯೋತ್ಪಾದನಾ ನಿಗ್ರಹ ದಳ ನೀಡಿರುವ ಮಾಹಿತಿಯ ಬಗ್ಗೆ ಗೃಹ ಸಚಿವಾಲಯದ ವಿಶೇಷ ಸಮಿತಿ ಅಂತಿಮ ನಿರ್ಧಾರ ಕೈಗೊಳ್ಳಲಿದೆ. ಎಟಿಎಸ್ ನೀಡಿರುವ ಮಾಹಿತಿ ಪ್ರಕಾರ, 270 ಯುಆರ್ ಎಲ್ ಗಳು ಇಸೀಸ್ ನ ವಿಚಾರಧಾರೆಗಳನ್ನು ಉತ್ತೇಜಿಸುತ್ತಿದ್ದು ಯುವಕರನ್ನು ಸೆಳೆಯುತ್ತಿದೆ ಈ ಹಿನ್ನೆಲೆಯಲ್ಲಿ ಯುಆರ್ ಎಲ್ ಗಳನ್ನು ಶೀಘ್ರವೇ ನಿಷೇಧಿಸಬೇಕೆಂದು ಒತ್ತಾಯಿಸಲಾಗಿದೆ. ಕಳೆದ ವರ್ಷವೂ ಇಂತಹದ್ದೇ ವರದಿ ನೀಡಿದ್ದ ಎಟಿಎಸ್ 94 ವೆಬ್ ಸೈಟ್ ಗಳನ್ನು ನಿಷೇಧಿಸಿತ್ತು.
Advertisement