
ನವದೆಹಲಿ: ಕೇಂದ್ರ ಸಚಿವರ ಸಂವೇದನಾಶೀಲತೆಯುಳ್ಳ ಕಾರ್ಯವೈಖರಿ ಮತ್ತೊಮ್ಮೆ ಸಾಬೀತಾಗಿದ್ದು, ಮಗಳ ಅನಾರೋಗ್ಯದ ಹಿನ್ನೆಲೆಯಲ್ಲಿ ಸಹಾಯ ಕೋರಿದ ನೌಕಾಪಡೆಯ ಮಾಜಿ ಅಧಿಕಾರಿ ರವಿಕಾಂತ್ ಸೋನಿ ಅವರ ನೆರವಿಗೆ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಧಾವಿಸಿದ್ದಾರೆ.
ವೆಂಟಿಲೇಟರ್ ನಲ್ಲಿದ್ದ ರವಿಕಾಂತ್ ಸೋನಿ ಅವರ ಪುತ್ರಿಯನ್ನು ದಾಖಲಿಸಿದ್ದ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸಾ ಸೌಲಭ್ಯಗಳು ಇಲ್ಲದ ಕಾರಣ ಅವರನ್ನು ಹೆಲಿಕಾಫ್ಟರ್ ಮೂಲಕ ದೆಹಲಿಯ ಆರ್ಮಿ ರಿಸರ್ಚ್ ಹಾಗು ರೆಫರಲ್ ಆಸ್ಪತ್ರೆಗೆ ಸ್ಥಳಾಂತರಿಸುವುದು ಅಗತ್ಯವಾಗಿತ್ತು. ಆದರೆ ಕೆಲವು ಕಾರಣಗಳಿಂದಾಗಿ ಹೆಲಿಕಾಫ್ಟರ್ ನೀಡಲು ವಾಯು ಪಡೆಯಿಂದ ಸಕಾರಾತ್ಮಕ ಸ್ಪಂದನೆ ದೊರೆಯದ ಹಿನ್ನೆಲೆಯಲ್ಲಿ ರವಿಕಾಂತ್ ಸೋನಿ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಗೆ ಟ್ವೀಟ್ ಮಾಡಿದ್ದಾರೆ.
" ನನ್ನ ಮಗಳು ಅನಾರೋಗ್ಯಕ್ಕೊಳಗಾಗಿದ್ದು ವೆಂಟಿಲೇಟರ್ ನಲ್ಲಿದ್ದಾಳೆ, ಆಕೆಯನ್ನು ಹೆಲಿಕಾಫ್ಟರ್ ಮೂಲಕ ದೆಹಲಿಯ ಆರ್ಮಿ ರಿಸರ್ಚ್ ಹಾಗು ರೆಫರಲ್ ಆಸ್ಪತ್ರೆಗೆ ಸ್ಥಳಾಂತರಿಸುವುದು ಅಗತ್ಯವಾಗಿದೆ, ಆದರೆ ಸಾಮಾನ್ಯ ಹೆಲಿಕಾಫ್ಟರ್ ಅಂಬಿಲೆನ್ಸ್ ಮೂಲಕ ಸ್ಥಳಾಂತರಿಸುವುದಕ್ಕೆ ಹವಾಮಾನ ವೈಪರಿತ್ಯ ಅಡ್ಡಿಯಾಗಿದೆ. ಅಷ್ಟೇ ಅಲ್ಲದೆ 1800 ಗಂಟೆಗಳಲ್ಲಿ ದೆಹಲಿಯಲ್ಲಿ ನಾಗರಿಕ ವಿಮಾನ ಅಂಬುಲೆನ್ಸ್ ಗಳು ಕಾರ್ಯನಿರ್ವಹಿಸುವುದಕ್ಕೆ ಅವಕಾಶ ಇರುವುದಿಲ್ಲ, ನಮಗೆ ಕಡಿಮೆ ಸಮಯ ಇದೆ, ಆದರೂ ನೀವು ನಮಗೆ ಸಹಾಯ ಮಾಡಬಹುದು ಎಂದು ಟ್ವೀಟ್ ಮಾಡಿದ್ದಾರೆ. ನಿಮ್ಮ ಸಹಾಯ ರಕ್ಷಣಾ ಇಲಾಖೆಯಲ್ಲಿರುವಮ್ ನಿವೃತ್ತರಾಗಿರುವ ಲಕ್ಷಾಂತರ ಜನರ ನಂಬಿಕೆಯನ್ನು ಉಳಿಸುತ್ತದೆ ಎಂದು ರವಿಕಾಂತ್ ಸೋನಿ ಸರಣಿ ಟ್ವೀಟ್ ಮಾಡಿ ಮನವಿ ಮಾಡಿದ್ದಾರೆ.
ಟ್ವೀಟ್ ಗಳನ್ನು ನೋಡುತ್ತಿದ್ದಂತೆಯೇ ಕಾರ್ಯನಿರತರಾದ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಚತ್ತೀಸ್ ಗಢದಿಂದ ದೆಹಲಿಗೆ ರೋಗಿಯನ್ನು ಆರ್ಮಿ ರಿಸರ್ಚ್ ಹಾಗೂ ರೆಫರಲ್ ಆಸ್ಪತ್ರೆಗೆ ವಾಯುಸೇನೆ ಹೆಲಿಕಾಫ್ಟರ್ ಆಂಬುಲೆನ್ಸ್ ಮೂಲಕ ಕರೆತರಲು ರಕ್ಷಣಾ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ನಂತರ ರಕ್ಷಣಾ ಸಚಿವರಿಗೆ ನೌಕಾ ಪಡೆಯ ಮಾಜಿ ಅಧಿಕಾರಿ ರವಿಕಾಂತ್ ಸೋನಿ ಟ್ವೀಟ್ ಮಾಡಿದ್ದು ಧನ್ಯವಾದ ತಿಳಿಸಿದ್ದು ಈ ಸಹಾಯವನ್ನು ಎಂದಿಗೂ ಮರೆಯುವುದಿಲ್ಲ, ಭಾರತೀಯ ಸೇನಾಪಡೆ ಭಾಗವಾಗಿದ್ದಿದ್ದಕ್ಕೆ ಹೆಮ್ಮೆಯಾಗುತ್ತಿದೆ ಎಂದು ಹೇಳಿದ್ದಾರೆ.
Advertisement