ನವದೆಹಲಿ: ಮಾದಕ ವಸ್ತು ಕೇಸಿಗೆ ಸಂಬಂಧಪಟ್ಟಂತೆ ನಿನ್ನೆ ಇಂಡೋನೇಷಿಯಾದಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾಗಬೇಕಾಗಿದ್ದ ಭಾರತೀಯ ಪ್ರಜೆ ಗುರ್ದೀಪ್ ಸಿಂಗ್ ನನ್ನು ನೇಣಿಗೇರಿಸಿಲ್ಲ ಎಂದು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ತಿಳಿಸಿದ್ದಾರೆ.
ಇಂಡೋನೇಷಿಯಾದಲ್ಲಿರುವ ಭಾರತೀಯ ರಾಯಭಾರಿ ಕಳೆದ ರಾತ್ರಿ ಗುರ್ದೀಪ್ ಸಿಂಗ್ ಗೆ ಮರಣದಂಡನೆ ಶಿಕ್ಷೆ ನೀಡಿಲ್ಲ ಎಂದು ನನಗೆ ತಿಳಿಸಿದ್ದಾರೆ ಎಂದು ಸುಷ್ಮಾ ಸ್ವರಾಜ್ ಟ್ವೀಟ್ ಮಾಡಿದ್ದಾರೆ.
ಬಂದೂಕು ಪಡೆಯಿಂದ ಇತರ ನಾಲ್ವರನ್ನು ನೇಣಿಗೇರಿಸಿದ್ದು, ಭಾರತೀಯನಿಗೆ ಏಕೆ ವಿನಾಯ್ತಿ ನೀಡಲಾಯಿತು ಎಂದು ಸ್ಪಷ್ಟವಾಗಿ ತಿಳಿದಿಲ್ಲ.
300 ಗ್ರಾಂ ಹೆರಾಯಿನ್ ನ್ನು ಕಳ್ಳಸಾಗಣೆ ಮಾಡಲು ಯತ್ನಿಸಿದ ಆಪಾದನೆಗೆ ಸಂಬಂಧಿಸಿ ಇಂಡೋನೇಷಿಯಾ ನ್ಯಾಯಾಲಯದಲ್ಲಿ 2005ರಲ್ಲಿ ಗುರ್ದೀಪ್ ಸಿಂಗ್ ಗೆ ಮರಣದಂಡನೆ ಶಿಕ್ಷೆ ನೀಡಲಾಗಿತ್ತು. ಆತನನ್ನು ಶಿಕ್ಷೆಯಿಂದ ಬಚಾವು ಮಾಡಲು ಭಾರತ ಸರ್ಕಾರ ಎಲ್ಲಾ ರೀತಿಯ ಪ್ರಯತ್ನ ಮಾಡಿತ್ತು.
ಪಂಜಾಬ್ ರಾಜ್ಯದ ಜಲಂದರ್ ನ 48 ವರ್ಷದ ಗುರ್ದೀಪ್ ಸಿಂಗ್ ಇತರ 13 ಮಂದಿಯೊಂದಿಗೆ ಮರಣದಂಡನೆ ಶಿಕ್ಷೆಗೆ ಗುರಿಯಾಗಿದ್ದ. ಈಗ ಆತ ಇಂಡೋನೇಷಿಯಾದ ನುಸಕಂಬಂಗನ್ ಪಸಿರ್ ಪುತ್ಹಿಯ ಜೈಲಿನಲ್ಲಿದ್ದಾನೆ. 13 ಮಂದಿ ಇಂಡೋನೇಷಿಯಾ, ನೈಜೀರಿಯಾ, ಜಿಂಬಾಬ್ವೆ ಮತ್ತು ಪಾಕಿಸ್ತಾನದ ಪ್ರಜೆಗಳಾಗಿದ್ದಾರೆ.