ನಿರ್ಭಯಾ ಪ್ರಕರಣ: ಕಬ್ಬಿಣದ ರಾಡ್ ಸಿದ್ಧಾಂತ ಸಾಬೀತು ಪಡಿಸಿದರೆ ರೂ. 10 ಲಕ್ಷ ಬಹುಮಾನ ಎಂದ ಆರೋಪಿ ಪರ ವಕೀಲ
ದೆಹಲಿ: ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ನಿರ್ಭಯಾ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ವಿಚಾರಣೆ ಬಹುತೇಕ ಅಂತಿಮ ಘಟ್ಟಕ್ಕೆ ತಲುಪಿದೆ. ನಿರ್ಭಯಾ ಪರ ವಕೀಲರ ವಾದದ ಅಂಶಗಳನ್ನು ವಿರೋಧಿಸಿರುವ ಅಪರಾಧಿಗಳ ಪರ ವಕೀಲ ಎಂ.ಎಲ್ ಶರ್ಮಾ ಹೊಸದೊಂದು ಸವಾಲು ಹಾಕಿದ್ದಾರೆ.
ನಿರ್ಭಯಾ ಅತ್ಯಾಚಾರ ವೇಳೆ ಆಕೆಗೆ ಗುಪ್ತಾಂಗದೊಳಗೆ ಕಬ್ಬಿಣದ ರಾಡ್ ತೂರಿಸಲಾಗಿತ್ತು ಎಂಬ ಹೇಳಿಕೆಯನ್ನು ವಿರೋಧಿಸಿರುವ ಅವರು ಈ ಸಿದ್ದಾಂತವನ್ನು ಯಾರಾದರೂ ಸಾಬೀತು ಪಡಿಸಿದರೇ ಅವರಿಗೆ 10 ಲಕ್ಷ ರೂ ಬಹುಮಾನ ನೀಡುವುದಾಗಿ ಘೋಷಿಸಿದ್ದಾರೆ.
ತಮ್ಮ ಕಕ್ಷಿದಾರರಾದ ಪವನ್ ಮತ್ತು ಮುಕೇಶ್ ರಿಗೆ ನೀಡಿರುವ ಗಲ್ಲು ಶಿಕ್ಷೆಯನ್ನು ತಡೆಯಲು ಯತ್ನಿಸುತ್ತಿರುವ ಶರ್ಮಾ, ಪೊಲೀಸರು ಹೇಳಿರುವಂತೆ ನಿರ್ಭಯಾ ಗುಪ್ತಾಂಗಕ್ಕೆ ಆರೋಪಿಗಳು ಕಬ್ಬಿಣದ ರಾಡ್ ತೂರಿಸಿದ್ದಾರೆ ಎನ್ನುವುದು ಸುಳ್ಳು, ಒಂದು ವೇಳೆ ಕಬ್ಬಿಣದ ರಾಡ್ ಗುಪ್ತಾಂಗದೊಳಗೆ ತೂರಿಸಿದ್ದರೇ ಗರ್ಭಕೋಶ ಮತ್ತು ಒಳಗಿನ ಸೂಕ್ಷ್ಮ ಅಂಗಾಂಗಳಿಗೆ ಹಾನಿಯಾಗಬೇಕಿತ್ತು, ಆದರೆ ಸಿಂಗಾಪುರ ವೈದ್ಯರ ಮರಣೋತ್ತರ ಪರೀಕ್ಷೆಯಲ್ಲಿ ನಿರ್ಭಯಾ ಗರ್ಭಕೋಶ ಮತ್ತು ಅಂಡಾಶಯಗಳಿಗೆ ಯಾವುದೇ ಹಾನಿಯಾಗಿಲ್ಲ ಎಂದು ತಿಳಿಸಿದೆ ಎಂದು ಶರ್ಮಾ ಸುಪ್ರೀಂ ಕೋರ್ಟ್ ನ ಮೂವರ ನ್ಯಾಯದೀಶರನ್ನೊಳಗೊಂಡ ವಿಭಾಗೀಯ ಪಿಠದ ಮುಂದೆ ತಮ್ಮ ವಾದ ಮಂಡಿಸಿದ್ದಾರೆ.
ಜೊತೆಗೆ ಯಾರಾದರೂ ಈ ಕಬ್ಬಿಣದ ರಾಡ್ ಸಿದ್ದಾಂತವನ್ನು ಪ್ರಯೊಗಿಸಿ, ಅಂದರೆ ಗುಪ್ತಾಂಗದೊಳಗೆ ರಾಡ್ ತೂರಿಸಿ ಗರ್ಭಕೋಶ ಮತ್ತು ಅಂಡಾಶಯಗಳಿಗೆ ಹಾನಿಯಾಗದಂತೆ ರಾಡ್ ವಾಪಸ್ ತೆಗೆದರೇ ಅಂಥವರಿಗೆ 10 ಲಕ್ಷ ರೂ ಬಹಮಾನ ನೀಡುವುದಾಗಿ ಘೋಷಿಸಿದ್ದಾರೆ.
2012 ರ ಡಿಸೆಂಬರ್ ರಂದು ಮಧ್ಯರಾತ್ರಿ ಚಲಿಸುವ ಬಸ್ ನಲ್ಲಿ ಫಿಸಿಯೋಥೆರಪಿಸ್ಟ್ ವ್ಯಾಸಂಗ ಮಾಡುತ್ತಿದ್ದ ನಿರ್ಭಯಾಳ ಮೇಲೆ ಕ್ರೂರವಾಗಿ ಅತ್ಯಾಚಾರ ಮಾಡಲಾಗಿತ್ತು. ಈ ಸಂಬಂಧ ನಾಲ್ವರು ಅಪರಾಧಿಗಳಿಗೆ ಗಲ್ಲು ಶಿಕ್ಷೆ ವಿಧಿಸಲಾಗಿತ್ತು. ಅದರಲ್ಲಿ ಮೂರು ವರ್ಷಗಳ ಹಿಂದೆ ರಾಮ್ ಸಿಂಗ್ ತಿಹಾರ್ ಜೈಲಿನಲ್ಲಿ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದ, ಮತ್ತೊಬ್ಬ ಬಾಲಪರಾಧಿಗೆ 3 ವರ್ಷಗಳ ಶಿಕ್ಷೆ ವಿಧಿಸಿ ಬಿಡುಗಡೆ ಮಾಡಲಾಗಿತ್ತು. ಇನ್ನು ಉಳಿದ ಇಬ್ಬರು ಅಪರಾಧಿಗಳಿಗೆ ಗಲ್ಲು ಶಿಕ್ಷೆ ವಿಧಿಸಲಾಗಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ