ಬಹುಕೋಟಿ ಡ್ರಗ್ ಜಾಲ ಪ್ರಕರಣ: ನಟಿ ಮಮತಾ ಕುಲಕರ್ಣಿಯ 8 ಬ್ಯಾಂಕ್ ಖಾತೆ ಜಫ್ತಿ

ಬಹುಕೋಟಿ ಮಾದಕ ವಸ್ತು ಎಫೆಡ್ರೈನ್ ಜಾಲಕ್ಕೆ ಸಂಬಂಧಿಸಿದಂತೆ ಥಾಣೆ ಪೊಲೀಸರು ಮಾಜಿ ಚಿತ್ರ ನಟಿ ಮಮತಾ ಕುಲಕರ್ಣಿ ಅವರ 8 ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಿ...
ಮಮತಾ ಕುಲಕರ್ಣಿ
ಮಮತಾ ಕುಲಕರ್ಣಿ
ಥಾಣೆ: ಬಹುಕೋಟಿ ಮಾದಕ ವಸ್ತು ಎಫೆಡ್ರೈನ್ ಜಾಲಕ್ಕೆ ಸಂಬಂಧಿಸಿದಂತೆ ಥಾಣೆ ಪೊಲೀಸರು ಮಾಜಿ ಚಿತ್ರ ನಟಿ ಮಮತಾ ಕುಲಕರ್ಣಿ ಅವರ 8 ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಿ(ಜಫ್ತಿ) ಸುಮಾರು 90 ಲಕ್ಷಕ್ಕೂ ಹೆಚ್ಚು ಮೊತ್ತದ ಹಣವನ್ನು ವಹಿವಾಟು ನಡೆಸದಂತೆ ತಡೆಹಿಡಿದಿದ್ದಾರೆ. 
ಮಮತಾ ಕುಲಕರ್ಣಿ, ಅಂತಾರಾಷ್ಟ್ರೀಯ ಮಾದಕ ವಸ್ತು(ಡ್ರಗ್) ಜಾಲದ ಮುಖ್ಯಸ್ಥ ಹಾಗೂ ಅದರ ಪಾಲುದಾರನೂ ಆಗಿರುವ ವಿಕಿ ಗೋಸ್ವಾಮಿ ಅವರೊಂದಿಗೆ ಸಂಪರ್ಕ ಹೊಂದಿರುವ ಪ್ರಮುಖ ಆರೋಪಿಯಾಗಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿಯೊಬ್ಬರ ಮಾಹಿತಿ ಪ್ರಕಾರ ಒಂದೇ ವಾರದಲ್ಲಿ , ಮಮತಾ ಕುಲಕರ್ಣಿ ಗೆ ಸೇರಿದ ಗುಜರಾತ್ ಹಾಗೂ ಥಾಣೆಯ 8 ಬ್ಯಾಂಕ್ ಗಳ ಖಾತೆಗಳನ್ನು ಸ್ಥಗಿತಗೊಳಿಸಲಾಗಿದ್ದು, ಈ ಖಾತೆಗಳು ಮಮತಾ ಕುಲಕರ್ಣಿ ಭಾಗಿಯಾಗಿದ್ದ ಡ್ರಗ್ ಕೂಟಕ್ಕೆ ನೆರವಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ. 
ಮಾಲ್ಡಾದ ಖಾಸಗಿ ಬ್ಯಾಂಕ್ ಒಂದರಲ್ಲೇ ಮಮತಾ ಕುಲಕರ್ಣಿ ಸುಮಾರು 67 ಲಕ್ಷ (ವಿದೇಶಿ ಕರೆನ್ಸಿ) ಇಟ್ಟಿದ್ದರು. ಇನ್ನು ಉಳಿದ 26 ಲಕ್ಷಗಳನ್ನು ಥಾಣೆಯ ಕಲ್ಯಾಣ್, ಬಾದ್ಲಾಪುರ್ ಹಾಗೂ ಗುಜರಾತ್ ನ ನಾರಿಮನ್ ಪಾಯಿಂಟ್, ಧರಾವಿ, ರಾಜ್ ಕೋಟ್, ಭುಜ್ ನ 7 ವಿವಿಧ ಖಾತೆಯಲ್ಲಿ ಜಮಾ ಮಾಡಿದ್ದರು ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ಎಲ್ಲಾ ಬ್ಯಾಂಕ್ ಖಾತೆಗಳ ವಹಿವಾಟಿಗೆ ಸಂಬಂಧಿಸಿದ ಮಮತಾ ಕುಲಕರ್ಣಿಯ ಹಿರಿಯ ಸಹೋದರಿ ಹಾಗೂ ಮಮತಾ ಕುಲಕರ್ಣಿಗೆ ಸಂಬಂಧಿಸಿದವರ ವಿಚಾರಣೆ ನಡೆಯುತ್ತಿದ್ದು, ತನಿಖಾಧಿಕಾರಿಗಳು ಮಮತಾ ಕುಲಕರ್ಣಿಗೆ ಸಂಬಂಧಿಸಿದ ಆಸ್ತಿ ವಿವರಣೆ ನೀಡುವಂತೆ ಸಂಬಂಧಿಸಿದ ಅಧಿಕಾರಿಗಳನ್ನು ಕೇಳಿದ್ದಾರೆ.   
ಮಾದಕ ವಸ್ತು ಎಫೆಡ್ರೈನ್ ಜಾಲದಲ್ಲಿ ಒಟ್ಟು 17 ಆರೋಪಿಗಳಿದ್ದು ಈ ಪೈಕಿ 10 ಜನರನ್ನು ಈಗಾಗಲೇ ಬಂಧಿಸಲಾಗಿದೆ. ಈ ಜಾಲದಲ್ಲಿ ಮತ್ತಷ್ಟು ಜನರು ಭಾಗಿಯಾಗಿರುವ ಶಂಕೆ ಇದ್ದು, ಬಂಧಿತ ಅರೋಪಿಗಳ ವಿರುದ್ಧ ಥಾಣೆ ಪೊಲೀಸರು ಈಗಾಗಲೆ ಚಾರ್ಜ್ ಶೀಟ್ ದಾಖಲಿಸಿದ್ದಾರೆ. ಜಾಲದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿರುವ ಮಮತಾ ಕುಲಕರ್ಣಿ, ಎಫೆಡ್ರೈನ್ ಜಾಲವನ್ನು ಯಶಸ್ವಿಯಾಗಿ ಜಾರಿಗೊಳಿಸುವ ವಿಧಾನಗಳ ಬಗ್ಗೆ ಕೀನ್ಯ, ದುಬೈಗಳಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿದ್ದರು ಎಂದು ಪೊಲೀಸರು ಈ ಹಿಂದೆ ಮಾಹಿತಿ ನೀಡಿದ್ದರು. 
ಏಪ್ರಿಲ್ ನಲ್ಲಿ ಮಹಾರಾಷ್ಟ್ರದ ಸೋಲಾಪುರದ ಏವನ್ ಲೈಫ್ ಸೈನ್ಸ್ ಲಿಮಿಟೆಡ್ ನ ಸುತ್ತಮುತ್ತಲ ಪ್ರದೇಶದಲ್ಲಿ ದಾಳಿ ನಡೆಸಿದಾಗ ಸುಮಾರು 2,000 ಕೋಟಿಯ ಮೌಲ್ಯದ 18.5 ಟನ್ ನಷ್ಟು ಎಫೆಡ್ರೈನ್ ನ್ನು ವಶಪಡಿಸಿಕೊಂಡಿದ್ದ ಪೊಲೀಸರು ಕೆಲವು ಆರೋಪಿಗಳನ್ನು ಬಂಧಿಸಿದ್ದರು. ಪೊಲೀಸರ ಪ್ರಕಾರ ಎಫೆಡ್ರೈನ್ ನಿಯಂತ್ರಿತ ಔಷಧ(ಕಂಟ್ರೋಲ್ಡ್ ಡ್ರಗ್) ಆಗಿದ್ದು ಇದನ್ನು ಸೋಲಾಪುರದ ಏವನ್ ಲೈಫ್ ಸೈನ್ಸಸ್ ನಿಂದ ಸಂಸ್ಕರಣೆಯಾದ ನಂತರ ವಿದೇಶಗಳಿಗೆ ಕಳಿಸಲಾಗುತ್ತಿತ್ತು ಹಾಗೂ ಪ್ರಸಿದ್ಧ ಪಾರ್ಟಿ ಡ್ರಗ್ ಮೆಥಂಫೆಟಾಮಿನ್ ತಯಾರಿಸುವಿಕೆಗೆ ಬಳಕೆ ಮಾಡಲಾಗುತ್ತಿತ್ತು. 
ಸಾಗರ್ ಸುರೇಶ್ ಪೌಲೆ, ಮಯೂರ್ ಸುರೇಶ್ ಸುಖ್ ಧರೆ, ರಾಜೇಂದ್ರ ದಿಮ್ರಿ, ಧನೇಶ್ವರ್ ರಾಜಾರಾಮ್ ಸ್ವಾಮಿ, ಪುನೀತ್ ರಮೇಶ್ ಶೃಂಗಿ, ಮನೋಜ್ ತೇಜ್ ರಾಜ್ ಜೈನ್, ಹರ್ದೀಪ್ ಸಿಂಗ್ ಇಂದರ್ ಸಿಂಗ್ ಗಿಲ್, ನರೇಂದ್ರ ಧೀರಜ್ ಲಾಲ್ ಕಛಾ, ಬಾಬಾಸಾಹೇಬ್ ಶಂಕರ್ ಧೋತ್ರೆ ಹಾಗೂ ಜೈ ಮುಲ್ಜಿ ಮುಖಿ ಎಫೆಡ್ರೈನ್ ಜಾಲದಲ್ಲಿದ್ದ ಅರೋಪದಡಿ ಬಂಧಿತರಾಗಿದ್ದಾರೆ. ರಾಜಕಾರಣಿಯೊಬ್ಬನ ಮಗ ಕಿಶೋರ್ ರಾಥೋಡ್, ಹಾಗೂ ಡಾ. ಅಬ್ದುಲ್ಲಾ ಎಂಬ ಇನ್ನಿಬ್ಬರು ಅರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com