ಮುಂದಿನ 25 ವರ್ಷಗಳಲ್ಲಿ ಗಂಗಾ ನದಿ ಬತ್ತಲು ಪ್ರಾರಂಭವಾಗುತ್ತದೆ: ಪರಿಸರ ವಿಜ್ಞಾನಿ ಬಿಡಿ ತ್ರಿಪಾಠಿ

ನಿರಂತರವಾಗಿ ಕಲುಷಿತಗೊಳ್ಳುತ್ತಿರುವ ಗಂಗಾ ನದಿ ಬಗ್ಗೆ ಪರಿಸರ ವಿಜ್ಞಾನಿ ಬಿಡಿ ತ್ರಿಪಾಠಿ ಆತಂಕ ವ್ಯಕ್ತಪಡಿಸಿದ್ದು, ಇನ್ನು 25 ವರ್ಷಗಳಲ್ಲಿ ಗಂಗಾ ನದಿ ಬತ್ತಲು ಪ್ರಾರಂಭವಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಗಂಗಾ ನದಿ
ಗಂಗಾ ನದಿ

ವಾರಾಣಸಿ: ನಿರಂತರವಾಗಿ ಕಲುಷಿತಗೊಳ್ಳುತ್ತಿರುವ ಗಂಗಾ ನದಿ ಬಗ್ಗೆ ಪರಿಸರ ವಿಜ್ಞಾನಿ ಬಿಡಿ ತ್ರಿಪಾಠಿ ಆತಂಕ ವ್ಯಕ್ತಪಡಿಸಿದ್ದು, ಪರಿಸ್ಥಿತಿ ಹೀಗೆಯೇ ಮುಂದುವರೆದಲ್ಲಿ ಇನ್ನು 25 ವರ್ಷಗಳಲ್ಲಿ ಗಂಗಾ ನದಿ ಬತ್ತಲು ಪ್ರಾರಂಭವಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಬಿಡಿ ತ್ರಿಪಾಠಿ, ಗಂಗಾ ನದಿ ಕೇವಲ ಮಲಿನಗೊಳ್ಳುತ್ತಿಲ್ಲ, ಬದಲಾಗಿ ನಶಿಸಿ ಹೋಗುವ ಅಪಾಯ ಎದುರಿಸುತ್ತಿದ್ದು, ಪ್ರಮುಖ ಪ್ರದೇಶಗಳಲ್ಲಿ ಇನ್ನು 25 ವರ್ಷಗಳಲ್ಲಿ ಗಂಗಾ ನದಿ ಬತ್ತಲು ಪ್ರಾರಂಭವಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಗಂಗಾ ನದಿಯನ್ನು ಶುದ್ಧೀಕರಣ ಮಾಡುವ ಯೋಜನೆಗಿಂತ ಗಂಗಾನದಿಯನ್ನು ಬದುಕಿಸುವ(ಉಳಿಸಿಕೊಳ್ಳುವ) ಕುರಿತು ಆಲೋಚಿಸಬೇಕಿರುವ ಅನಿವಾರ್ಯತೆ ಎದುರಾಗಿದೆ, ಈ ಬಗ್ಗೆ ಈ ವರೆಗೂ ಬಂದಿರುವ ಸರ್ಕಾರಗಳಿಗೆ ಮಾಹಿತಿ ನೀಡಲಾಗಿದೆಯಾದರೂ, ಗಂಗಾ ನದಿಯನ್ನು ಕಾಪಾಡಿಕೊಳ್ಳಲು ಸರ್ಕಾರಗಳು ಮಾಡಿರುವುದು ಅತ್ಯಲ್ಪ ಎಂದು ತ್ರಿಪಾಠಿ ಅಭಿಪ್ರಾಯಪಟ್ಟಿದ್ದಾರೆ. ಒಂದು ವೇಳೆ ನಾವು ಈಗ ಗಂಗಾ ನದಿಯನ್ನು ಉಳಿಸಿಕೊಳ್ಳುವ ಬಗ್ಗೆ ಹೆಚ್ಚು ಗಮನ ನೀಡದೆ ಇದ್ದರೆ, ಗಂಗಾ ನದಿ ತನ್ನನ್ನು ತಾನೇ ಶುದ್ಧೀಕರಿಸಿಕೊಳ್ಳುತ್ತದೆ, ಅದರ ಪರಿಣಾಮ ಕೇದಾರನಾಥದಲ್ಲಿ 2013 ರಲ್ಲಿ ಉಂಟಾದ ಜಲಪ್ರಳಯದ ರೀತಿಯಲ್ಲಿರುತ್ತದೆ ಎಂದಿದ್ದಾರೆ.

"ನನ್ನ ದಶಕಗಳ ಸಂಶೋಧನೆ ಪ್ರಕಾರ, ಪ್ರಸ್ತುತ ಗಂಗಾ ನದಿಯಳ್ಳಿ ಉಂಟಾಗುತ್ತಿರುವ ಮಲಿನದ ವಿಚಾರಕ್ಕಿಂತ, ನದಿಯನ್ನು ಹೇಗೆ ಉಳಿಸುವುದು ಎಂಬುದು ಪ್ರಮುಖವಾಗಿದೆ. ಘಾಟ್ ಗಳನ್ನೂ ಸ್ವಚ್ಛಗೊಳಿಸುವುದರಿಂದ ಅಥವಾ ಮಹತ್ವಪೂರ್ಣವಾದ ಯೋಜನೆಗಳನ್ನು ಘೋಷಿಸುವುದರಿಂದ ಗಂಗಾ ನದಿಗೆ ಸಂಬಂಧಿಸಿದಂತೆ ಏನನ್ನೂ ಸಾಧಿಸಲು ಸಾಧ್ಯವಾಗುವುದಿಲ್ಲ ಎಂದು ತ್ರಿಪಾಠಿ ಹೇಳಿದ್ದಾರೆ.

ವಾರಾಣಸಿ ಸುತ್ತಮುತ್ತ ಗಂಗಾ ನದಿಗೆ ತ್ಯಾಜ್ಯವನ್ನು ಕಳಿಸುವ ಸುಮಾರು 30  ಒಳಚರಂಡಿಗಳಿದ್ದು, ಪ್ರತಿದಿನ 300 ಮಿಲಿಯನ್ ಲೀಟರ್ ಗಳಷ್ಟು ತ್ಯಾಜ್ಯ ನೀರು ಉತ್ಪಾದನೆಯಾಗುತ್ತದೆ. ತ್ಯಾಜ್ಯಗಳನ್ನು ಸಂಸ್ಕರಿಸಲು ಮೂರು ಸಂಸ್ಕರಣಾ ಘಟಕಗಳಿದ್ದು ಇದರಲ್ಲಿ ಕೇವಲ 102 ಎಂಎಲ್ ಡಿ ಯಷ್ಟು ನೀರು ಮಾತ್ರ ಸಂಸ್ಕರಣೆಯಾಗುತ್ತಿದೆ, ಉಳಿದ 198 ಎಂಎಲ್ ಡಿ ಯಷ್ಟು ನೀರು ಸಂಸ್ಕರಣೆಯಾಗದೆ ಗಂಗಾ ನದಿ ಸೇರುತ್ತಿದೆ. ಇನ್ನು ನದಿಯಲ್ಲಿ ಶವಗಳನ್ನು ಹಾಕುವುದು ಮತ್ತೊಂದು ದೊಡ್ಡ ಸಮಸ್ಯೆಯಾಗಿದ್ದು ಪರಿಸ್ಥಿತಿ ಹೀಗೆಯೇ ಮುಂದುವರೆದರೆ ಮುಂದಿನ 25 ವರ್ಷಗಳಲ್ಲಿ ಗಂಗಾ ನದಿ ಬತ್ತಲು ಪ್ರಾರಂಭವಾಗುತ್ತದೆ ಎಂದು ಪರಿಸರ ವಿಜ್ಞಾನಿ ಬಿಡಿ ತ್ರಿಪಾಠಿ ಆತಂಕ ವ್ಯಕ್ತಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X

Advertisement

X
Kannada Prabha
www.kannadaprabha.com