ನವದೆಹಲಿ: ನೇರ ನಗದು ವರ್ಗಾವಣೆ ವ್ಯವಸ್ಥೆ(ಡಿಬಿಟಿ) ಅನುಷ್ಠಾನಕ್ಕೆ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಡಿಸೆಂಬರ್ 31ರೊಳಗಾಗಿ ಆಧಾರ್ ಗೆ ಡಿಬಿಟಿಯ ಸಂಪರ್ಕ ಕಲ್ಪಿಸಿ ಎಂದು ಸಂಪುಟದ ಸಚಿವರಿಗೆ ಕಟ್ಟುನಿಟ್ಟಾಗಿ ಸೂಚಿಸಿದ್ದಾರೆ.
ಸಂಪುಟದ ಕಾರ್ಯದರ್ಶಿಗಳು ಎಲ್ಲಾ ಸಚಿವರಿಗೂ ಈ ಕುರಿತು ಪತ್ರ ಕಳುಹಿಸಿದ್ದು, ಜೂನ್ 30ರೊಳಗೆ ಆಂತರಿಕ ಡಿಬಿಟಿ ಸೆಲ್ ಗಳನ್ನು ರಚಿಸಿ ಎಂದು ನಿರ್ದೇಶಿಸಿದ್ದಾರೆ.
ಆಧಾರ್ ಮತ್ತು ಡಿಬಿಟಿ ಸುಧಾರಣೆ ಬಗ್ಗೆ ಮೇ 9ರಂದು ಪ್ರಧಾನಿ ನರೇಂದ್ರ ಮೋದಿ ಪರಿಶೀಲನೆ ನಡೆಸಿದ್ದಾರೆ. ಡಿಬಿಟಿ ವ್ಯವಸ್ಥೆ ಅನುಷ್ಠಾನ ಕುಂಠಿತವಾಗಿರುವುದು ಕಂಡು ಬಂದಿದೆ. ಈ ಹಿನ್ನಲೆಯಲ್ಲಿ ಎಲ್ಲಾ ಸಚಿವರು ಮತ್ತು ರಾಜ್ಯಗಳು ಜೂನ್ 30ರೊಳಗಾಗಿ ಡಿಬಿಟಿ ಸೆಲ್ ಗಳನ್ನು ರಚಿಸಲು ಸೂಚಿಸಿದ್ದು, ಡಿಸೆಂಬರ್ 31ರೊಳಗಾಗಿ ಆಧಾರ್ ಗೆ ಡಿಬಿಟಿ ಸಂಪರ್ಕ ನೀಡುವಂತೆ ನಿರ್ದೇಶಿಸಲಾಗಿದೆ ಎಂದು ಸಂಪುಟದ ಕಾರ್ಯದರ್ಶಿಗಳಾದ ಎಸ್ ಕೆ ಶ್ರೀವತ್ಸವ್ ತಿಳಿಸಿದ್ದಾರೆ.
ಪ್ರತಿಯೊಂದು ಸಚಿವಾಲಯ ಅಥವಾ ಇಲಾಖೆ ಆಂತರಿಕ ಡಿಬಿಟಿ ಸೆಲ್ ಗಳನ್ನು ಹೊಂದಿರಬೇಕು. ಈ ಸೆಲ್ ಗಳಿಗೆ ಜಂಟಿ ಕಾರ್ಯದರ್ಶಿಗಳು ಮುಖ್ಯಸ್ಥರಾಗಿರುತ್ತಾರೆ. ಅಲ್ಲದೇ ಐಟಿ ತಜ್ಞರನ್ನು ಒಳಗೊಂಡಿರುತ್ತದೆ.
ಈಗಾಗಲೇ ಪಶುಸಂಗೋಪನೆ ಇಲಾಖೆ, ಡೈರಿ ಮತ್ತು ಮೀನುಗಾರಿಕೆ ಇಲಾಖೆ, ಪರಿಸರ ಮತ್ತು ಅರಣ್ಯ, ಹವಾಮಾನ ಸಚಿವಾಲಯ, ಕ್ರೀಡೆ ಇಲಾಖೆ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕೃಷಿ ಸಂಶೋಧನೆ ಇಲಾಖೆ, ಗೃಹ ವ್ಯವಾರಗಳ ಸಚಿವಾಲಯಗಳಲ್ಲಿ ಡಿಬಿಟಿ ಸೆಲ್ ಗಳು ರಚನೆಯಾಗಿದೆ ಎಂದು ಅವರು ಹೇಳಿದ್ದಾರೆ.