

ಅಬೋರ್: ಪ್ರಿಯತಮನನ್ನು ವಿವಾಹವಾಗುವ ಸಲುವಾಗಿ ಹೆತ್ತಮಗಳನ್ನೇ ಕೊಂದ ಆಘಾತಕಾರಿ ಘಟನೆಯೊಂದು ಪಂಜಾಬ್ ನ ಅಬೋರ್ ನಲ್ಲಿ ನಡೆದಿದೆ.
ಪಂಜಾಬ್ ನ ಅಬೋರ್ ನ ಪಂಜಪೀರ್ ನಿವಾಸಿ ಮಂಜು ಮತ್ತು ಆಕೆಯ ಪ್ರಿಯತಮ ವಿಜಯ್ ಕುಮಾರ್ ದೀಕ್ಷಾ ಎಂಬ 17 ವರ್ಷದ ಅಪ್ರಾಪ್ತೆಯನ್ನು ಕೊಲೆ ಮಾಡಿದ್ದಾರೆ.
ಮೇ 24 ರಂದು ತನ್ನ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ಮಂಜು ಪೊಲೀಸರಿಗೆ ದೂರು ನೀಡಿದ್ದಳು. ಪೊಲೀಸರು ಬಂದು ನೋಡಿದಾಗ ದೀಕ್ಷಾ ಶವ ಫ್ಯಾನ್ ನಲ್ಲಿ ನೇತಾಡುತ್ತಿತ್ತು. ದೀಕ್ಷಾ ತಂದೆ ಸತ್ತ ನಂತರ, ತಂದೆಯ ಸಹೋದರರು ಆಸ್ತಿಯಲ್ಲಿ ಪಾಲು ನೀಡಲಿಲ್ಲ ಹೀಗಾಗಿ ದೀಕ್ಷಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಹೇಳಿಕೆ ನೀಡಿದ್ದಳು. ಆದರೆ ದೀಕ್ಷಾ ಮುಂಗೈ ಮೇಲೆ ವಿಜಯ್ ಎಂಬ ಹೆಸರು ಬರೆದಿತ್ತು, ಜೊತೆಗೆ ಡೆತ್ ನೋಟ್ ಕೂಡ ಪೊಲೀಸರಿಗೆ ಸಿಕ್ಕಿತ್ತು. ನಂತರ ದೀಕ್ಷಾ ತಾಯಿ ಮಂಜುವನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದಾಗ ಸತ್ಯ ಹೊರ ಬಿದ್ದಿದೆ.
2015ರ ಅಕ್ಟೋಬರ್ ನಲ್ಲಿ ವಿಜಯ್ ಮತ್ತು ಮಂಜು ಫೇಸ್ ಬುಕ್ ನಲ್ಲಿ ಭೇಟಿಯಾಗಿದ್ದರು. ಆ ವೇಳೆ ವಿಜಯ್ ಸೌದಿ ಅರೇಬಿಯಾದಲ್ಲಿದ್ದ. ಇಬ್ಬರು ಪ್ರೀತಿ ಮಾಡಲು ಆರಂಭಿಸಿದರು. ನಂತರ ಆತ ಭಾರತಕ್ಕೆ ಬಂದ ನಂತರ ಇಬ್ಬರು ಸಂಬಂಧ ಇರಿಸಿಕೊಂಡಿದ್ದರು. ಕಳೆದ ಜನವರಿಯಿಂದ ವಿಜಯ್ ಮಂಜು ಮನೆಯಲ್ಲಿ ವಾಸಿಸಿದ್ದ.
ಇದಾದ ನಂತರ ವಿಜಯ್ ಮಂಜು ಮಗಳಾದ ದೀಕ್ಷಾ ಜೊತೆಗೆ ಪ್ರೀತಿ ಬೆಳೆಸಿದ. ತನ್ನ ತಾಯಿ ಜೊತೆ ವಿಜಯ್ ಗೆ ಸಂಬಂಧ ಇರುವುದು ದೀಕ್ಷಾಗೆ ತಿಳಿಯದೇ ಆತನನ್ನು ಅತಿಯಾಗಿ ಪ್ರೀತಿಸಲು ಆರಂಭಿಸಿದಳು. ಒಂದು ರಾತ್ರಿ ಮಂಜು ವಿಜಯ್, ಒಟ್ಟಿಗೆ ಹಾಸಿಗೆಯಲ್ಲಿರುವುದನ್ನು ಕಂಡ ದೀಕ್ಷಾ ಜಗಳ ಆರಂಭಿಸಿದ್ದಾಳೆ.
ದೀಕ್ಷಾ ಮತ್ತು ಮಂದು ಇಬ್ಬರು ವಿಜಯ್ ನನ್ನು ಮದುವೆಯಾಗಲು ಕಿತ್ತಾಡಿದ್ದಾರೆ. ತನ್ನ ಪ್ರೀತಿಯನ್ನು ತೋರಿಸಲು ವಿಜಯ್ ಹೆಸರನ್ನು ತನ್ನ ಮುಂಗೈ ಮೇಲೆ ಬರೆದುಕೊಂಡಿದ್ದಾಳೆ.ಆವೇಶದಲ್ಲಿ ಮಂಜು ತನ್ನ ಮಗಳ ಕುತ್ತಿಗೆ ಹಿಸುಕಿ ಕೊಲೆ ಮಾಡಿದ್ದಾಳೆ.ನಂತರ ವಿಜಯ್ ತನ್ನನ್ನು ರಕ್ಷಿಸಿಕೊಳ್ಳಲು ಆತನೇ ಒಂದು ಆತ್ಮಹತ್ಯೆ ಪತ್ರ ಬರೆದಿಟ್ಟಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.