ಶಾಸಕರಿಂದ ಮತಕ್ಕಾಗಿ ಲಂಚ ಸ್ಟಿಂಗ್: ಆರೋಪ-ಪ್ರತ್ಯಾರೋಪಕ್ಕಿಳಿದ ರಾಜಕೀಯ ಪಕ್ಷಗಳು

ಶಾಸಕರು ರಾಜ್ಯಸಭೆ ಚುನಾವಣೆಯಲ್ಲಿ ಅಭ್ಯರ್ಥಿಯೊಬ್ಬರಿಗೆ ಮತ ಹಾಕಲು ಹಣದ ಬೇಡಿಕೆಯಿಟ್ಟಿರುವ ಬಗೆಗಿನ ವರದಿ ರಾಜಕೀಯ ಪಕ್ಷಗಳ ನಡುವೆ ವಾಗ್ಯುದ್ಧ, ಆರೋಪ- ಪ್ರತ್ಯಾರೋಪಗಳಿಗೆ ಕಾರಣವಾಗಿದೆ.
ಶಾಸಕರಿಂದ ಮತಕ್ಕಾಗಿ ಲಂಚ ಸ್ಟಿಂಗ್: ಆರೋಪ-ಪ್ರತ್ಯಾರೋಪಕ್ಕಿಳಿದ ರಾಜಕೀಯ ಪಕ್ಷಗಳು

ಬೆಂಗಳೂರು: ಶಾಸಕರು ರಾಜ್ಯಸಭೆ ಚುನಾವಣೆಯಲ್ಲಿ ಅಭ್ಯರ್ಥಿಯೊಬ್ಬರಿಗೆ ಮತ ಹಾಕಲು ಹಣದ ಬೇಡಿಕೆಯಿಟ್ಟಿರುವ ಬಗೆಗಿನ ವರದಿ ರಾಜಕೀಯ ಪಕ್ಷಗಳ ನಡುವೆ ವಾಗ್ಯುದ್ಧ, ಆರೋಪ- ಪ್ರತ್ಯಾರೋಪಗಳಿಗೆ ಕಾರಣವಾಗಿದೆ. ಮತ ಚಲಾವಣೆ ಮಾಡಲು ಶಾಸಕರು ಹಣದ ಬೇಡಿಕೆ ಇಟ್ಟಿರುವುದರ ಬಗ್ಗೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗುತ್ತಿದ್ದರೂ ಅದನ್ನು ಗಂಭೀರವಾಗಿ ಪರಿಗಣಿಸದ ರಾಜಕೀಯ ಪಕ್ಷಗಳು ಪರಸ್ಪರ ಆರೋಪ- ಪ್ರತ್ಯಾರೋಪಗಳಲ್ಲಿ ತೊಡಗಿವೆ. ಶಾಸಕರು ಹಣದ ಬೇಡಿಕೆ ಇಟ್ಟಿರುವ ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಜೆಡಿಎಸ್ ನ ಮುಖಂಡ ಹೆಚ್ ಡಿ ರೇವಣ್ಣ, ಈ ಬಗ್ಗೆ ಸಿಬಿಐ ತನಿಖೆ ನಡೆಸಬೇಕೆಂದು ಆಗ್ರಹಿಸಿದ್ದಾರೆ. " ಕಾಂಗ್ರೆಸ್ ನಿಂದ ರಾಜ್ಯಸಭೆಗೆ ಸ್ಪರ್ಧಿಸಿರುವ ಮೂರನೇ ಅಭ್ಯರ್ಥಿ ( ಕೆಸಿ ರಾಮಮೂರ್ತಿ) ತಮಗೆ ಮತ ಹಾಕುವ ಶಾಸಕರಿಗೆ ಹಣ ನೀಡುವುದಾಗಿ ಹೇಳಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿಯ ಹೆಳಿಕೆಯನು ಚುನಾವಣಾ ಆಯೋಗ ಗಂಭೀರವಾಗಿ ಪರಿಗಣಿಸಿ ಹಣದ ಆಮಿಷವೊಡ್ಡಿರುವ ಅಭ್ಯರ್ಥಿಗಳ ವಿರುದ್ಧ ಪ್ರಕರಣ ದಾಖಲಾಗಬೇಕು ಎಂದು ಒತ್ತಾಯಿಸಿದ್ದಾರೆ.  
ಹಣದ ಬೇಡಿಕೆ ಇಟ್ಟಿರುವ ಶಾಸಕರ ಪೈಕಿ ಜೆಡಿಎಸ್ ನ ಬಂಡಾಯ ಶಾಸಕರು ಇದ್ದರಾ ಎಂಬುದರ ಬಗ್ಗೆಯೂ ತನಿಖೆ ನಡೆಸಬೇಕು ಎಂದು ರೇವಣ್ಣ ಆಗ್ರಹಿಸಿದ್ದಾರೆ. " ಮತಮಾರಾಟವನ್ನು ಬಹಿರಂಗಗೊಳಿಸಲು ನಡೆಸಿರುವ ಕುಟುಕು ಕಾರ್ಯಾಚರಣೆಯ ಉದ್ದೇಶ ರಾಜಕೀಯದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರವನ್ನು ಬಯಲಿಗೆಳೆಯುವುದಕ್ಕಿಂತ ಹೆಚ್ಚು ಜೆಡಿಎಸ್ ಪಕ್ಷವನ್ನು ನಿರ್ನಾಮ ಮಾಡುವುದೇ ಆಗಿತ್ತು ಎಂದು ಮಾಜಿ ಪ್ರಧಾನಿ ದೇವೇಗೌಡ ಆರೋಪಿಸಿದ್ದಾರೆ. ಕುಟುಕು ಕಾರ್ಯಾಚರಣೆ ಬಗ್ಗೆ ಚುನಾವಣಾ ಆಯೋಗಕ್ಕೆ ಪತ್ರ ಬರೆಯಲಾಗಿದ್ದು ಶೀಘ್ರವೇ ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಗಿದೆ. ಶಾಸಕರು ಮತಕ್ಕಾಗಿ ಹಣದ ಬೇಡಿಕೆ ಇಟ್ಟಿರುವುದನ್ನು ಗಂಭೀರವಾಗಿ ಸ್ವೀಕರಿಸಿರುವ ಕೇಂದ್ರ ಚುನಾವಣಾ ಆಯೋಗ, ರಾಜ್ಯ ಚುನಾವಣಾ ಆಯೋಗಕ್ಕೆ ವರದಿ ನೀಡುವಂತೆ ಸೂಚಿಸಿದೆ.

ಕುಟುಕು ಕಾರ್ಯಾಚರಣೆಯಿಂದ ಬಿಜೆಪಿ ಜೆಡಿಎಸ್ ಒಪ್ಪಂದಕ್ಕೆ ತಣ್ಣೀರು: ಸುದ್ದಿವಾಹಿನಿಯೊಂದು ಶಾಸಕರು ಮತಕ್ಕಾಗಿ ಹಣದ ಬೇಡಿಕೆ ಇಡುತ್ತಿರುವುದರ ಬಗ್ಗೆ ಕುಟುಕು ಕಾರ್ಯಾಚರಣೆ, ರಾಜ್ಯಸಭಾ ಚುನಾವಣೆ, ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ನಡುವಿನ ಸಂಭಾವ್ಯ ಮೈತ್ರಿಯ ಮೇಲೆ ಪರಿಣಾಮ ಬೀರಿದೆ. 
ಉಭಯ ಪಕ್ಷಗಳ ಬಳಿ ವಿಧಾನಪರಿಷತ್ ಗೆ ಕೇವಲ ಓರ್ವ ಸದಸ್ಯನನ್ನು ಆಯ್ಕೆ ಮಾಡುವಷ್ಟು ಮತಗಳಿದ್ದರೂ ಬಿಜೆಪಿ- ಜೆಡಿಎಸ್ ಇಬ್ಬರು ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಬಿಜೆಪಿ-ಜೆಡಿಎಸ್ ತಲಾ ಎರಡು ಅಭ್ಯರ್ಥಿಗಳನ್ನು ವಿಧಾನಪರಿಷತ್ ಗೆ ಆಯ್ಕೆ ಮಾಡಿಕೊಳ್ಳಲು ಮೈತ್ರಿ ಮಾಡಿಕೊಳ್ಳುವ ಸಾಧ್ಯತೆ ಇತ್ತು. ಆದರೆ ಕಾರ್ಯಾಚರಣೆಯಿಂದ ಮೈತ್ರಿಯ ಮೇಲೆ ಪರಿಣಾಮ ಬೀರಲಿದೆ. ಆದರೆ ಎರಡು ಪಕ್ಷಗಳು ಹೆಚ್ಚುವರಿ ಅಭ್ಯರ್ಥಿಗಳಿಗೆ ನಾಮಪತ್ರ ವಾಪಸ್ ಪಡೆಯುವಂತೆ ಸೂಚನೆ ನೀಡದೆ ಅಚ್ಚರಿ ಮೂಡಿಸಿದೆ.
ಸಿಎಂ ವಿರುದ್ಧ ಯಡಿಯೂರಪ್ಪ ಆರೋಪ:
ಕುಟುಕು ಕಾರ್ಯಾಚರಣೆ ನಡೆದಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ರಾಜ್ಯ ಬಿಜೆಪಿ ಅಧ್ಯಕ್ಷ ಬಿಎಸ್ ಯಡಿಯೂರಪ್ಪ, ಸಿದ್ದರಾಮಯ್ಯ ಅವರನ್ನು ಕುಟುಕು ಕಾರ್ಯಾಚರಣೆಯ ಸೂತ್ರಧಾರ ಎಂದು ಆರೋಪಿಸಿದ್ದು, ಕಾಂಗ್ರೆಸ್ ಅಭ್ಯರ್ಥಿಗಳಿಗೆ ಮತ ಹಾಕುವವರಿಗೆ ಬಿ 100 ಪ್ಯಾಕೇಜ್ ನೀಡಲಾಗುವುದು ಎಂದು ಆಮಿಷವೊಡ್ಡಲಾಗಿದೆ ಎಂದು ಯಡಿಯೂರಪ್ಪ ಆರೋಪಿಸಿದ್ದಾರೆ. ಆದರೆ ಆರೋಪವನ್ನು ನಿರಾಕರಿಸಿರುವ ಸಿಎಂ ಇದರಲ್ಲಿ ಕಾಂಗ್ರೆಸ್ ನ ಪಾತ್ರವಿಲ್ಲ ಎಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com