ಪಾಟ್ನಾ: ವಿಜ್ಞಾನ ಮತ್ತು ಕಲಾ ವಿಭಾಗದ ಟಾಪರ್ ಗಳ ಫಲಿತಾಂಶದಲ್ಲಿ ಅಕ್ರಮ ನಡೆದಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಬಿಹಾರ ಶಾಲಾ ಪರೀಕ್ಷಾ ಮಂಡಳಿ(ಬಿಎಸ್ಇಬಿ)ಯ ಅಧ್ಯಕ್ಷ ಲಲ್ಕೇಶ್ವರ ಪ್ರಸಾದ್ ಸಿಂಗ್ ಅವರು ತಮ್ಮ ಸ್ಥಾನಕ್ಕೆ ಬುಧವಾರ ರಾಜಿನಾಮೆ ನೀಡಿದ್ದಾರೆ.
ನಿನ್ನೆಯಷ್ಟೇ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ(ಎಸ್ಐಟಿ) ಬಿಎಸ್ಇಬಿ ಅಧ್ಯಕ್ಷರನ್ನು ವಿಚಾರಣೆಗೆ ಒಳಪಡಿಸಿತ್ತು. ಅಲ್ಲದೆ ಅವರ ಕಚೇರಿಯಲ್ಲಿನ ಕಂಪ್ಯೂಟರ್ ಮತ್ತು ಹಾರ್ಡ್ ಡಿಸ್ಕ್ ಗಳನ್ನು ವಶಕ್ಕೆ ಪಡೆದಿದೆ.
ತಜ್ಞರು ಕಂಪ್ಯೂಟರ್ ಮತ್ತು ಹಾರ್ಡ್ ಡಿಸ್ಕ್ ಗಳನ್ನು ಪರಿಶೀಲಿಸಿ, 12ನೇ ತರಗತಿಯ ವಿಜ್ಞಾನ ಮತ್ತು ಕಲಾ ಪರೀಕ್ಷೆಯ ಫಲಿತಾಂಶಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ಸಂಗ್ರಹಿಸಲಿದ್ದಾರೆ ಎಂದು ಎಸ್ ಐಟಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕಲಾ ವಿಭಾಗದಲ್ಲಿ ಅಗ್ರಸ್ಥಾನ ಪಡೆದ ರೂಬಿ ರಾಯ್ ರಾಜಕೀಯ ಶಾಸ್ತ್ರ ಅಡುಗೆ ಸಬ್ಜೆಕ್ಟ್ ಎಂದ ಬೆನ್ನಲ್ಲೇ ಪಿಯು ಪರೀಕ್ಷಾ ಮಂಡಳಿ 14 ಟಾಪರ್ಗಳಿಗೆ ಮರು ಪರೀಕ್ಷೆ ನಡೆಸಿತ್ತು. ಇದರಲ್ಲಿ ಸೌರಭ್ ಶ್ರೇಷ್ಠ, ರಾಹುಲ್ ಕುಮಾರ್, ರೂಬಿ ರಾಯ್ ಹಾಗೂ ಶಾಲಿನಿ ಎಂಬುವರು ಅನುತ್ತೀರ್ಣರಾಗಿದ್ದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ತನಿಖೆಗೆ ಆದೇಶಿಸಿದ್ದಾರೆ. ಅಲ್ಲದೇ ಅಪರಾಧವೆಸಗಿರುವ ಬಗ್ಗೆ ಮಾಹಿತಿ ಇದ್ದಲ್ಲಿ ಅವರ ವಿರುದ್ಧ ಕ್ರಿಮಿನಲ್ ಕೇಸು ದಾಖಲಿಸಿ ತನಿಖೆ ನಡೆಸಲಾಗುವುದು ಎಂದಿದ್ದಾರೆ. ಅಲ್ಲದೆ ವಿಶೇಷ ತನಿಖಾ ತಂಡಕ್ಕೆ 10 ದಿನದಲ್ಲಿ ವರದಿ ಸಲ್ಲಿಸುವಂತೆ ಸೂಚಿಸಿದ್ದಾರೆ.