
ನವದೆಹಲಿ : ನಕಲಿ ಪಾಸ್‌ಪೋರ್ಟ್ ಪ್ರಕರಣದಲ್ಲಿ ಭೂಗತ ಪಾತಕಿ ಛೋಟಾ ರಾಜನ್ ಮತ್ತು ಮೂವರು ನಿವೃತ್ತ ಸರ್ಕಾರಿ ಅಧಿಕಾರಿಗಳ ವಿರುದ್ಧ ಸಿಬಿಐ ವಿಶೇಷ ನ್ಯಾಯಾಲಯ ಪ್ರಕರಣ ದಾಖಲಿಸಿದೆ.
ವಿಡಿಯೋ ಕಾನ್ಫರೆನ್ಸ್ ಮೂಲಕ ರಾಜನ್ ನನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದಾಗ ತನ್ನನ್ನು ಅಪರಾಧಿ ಎಂದು ಪರಿಗಣಿಸಬಾರದೆಂದು ವಿಚಾರಣೆ ನಡೆಸುವಂತೆ ಮನವಿ ಮಾಡಿದ್ದನು. ವಾದ ವಿವಾದ ಆಲಿಸಿದ ಸಿಬಿಐ ವಿಶೇಷ ನ್ಯಾಯಾಲಯ ನ್ಯಾಯಮೂರ್ತಿ ವಿನೋದ್‌ಕುಮಾರ್ ಈ ಆದೇಶ ಹೊರಡಿಸಿದರು.
ನಾಲ್ವರು ಅರೋಪಿಗಳ ವಿರುದ್ಧ ವಂಚನೆ (ಐಪಿಸಿ 420), ಪೋರ್ಜರಿ (ಐಪಿಸಿ 471), ನಕಲಿ ದಾಖಲೆಪತ್ರಗಳ ಸೃಷ್ಟಿ (ಐಪಿಸಿ 468), ಖಜಾನೆಯಿಂದ ಅಕ್ರಮವಾಗಿ ಹಣ ವರ್ಗಾವಣೆ ಇಲ್ಲವೆ ತೆಗೆಯುವುದು (467), ಅಪರಾಧಕ್ಕೆ ಸಂಚು ರೂಪಿಸುವುದು (ಐಪಿಸಿ 120 ಬಿ) ಮತ್ತು ಪಾಸ್‌ಪೋರ್ಟ್ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
ಅಲ್ಲದೇ, ನಿವೃತ್ತ ಸರ್ಕಾರಿ ಅಧಿಕಾರಿಗಳ ವಿರುದ್ಧ ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಮೂವರು ಸರ್ಕಾರಿ ಅಧಿಕಾರಿಗಳ ನೆರವಿನಿಂದ ಮೋಹನ್ ಕುಮಾರ್ ಎಂಬುವವರ ಹೆಸರಿನಲ್ಲಿ ನಕಲಿ ಪಾಸ್‌ಪೋರ್ಟ್ ಪಡೆದಿದ್ದಾರೆ ಎಂಬ ಅರೋಪ ಛೋಟಾ ರಾಜನ್ ಮೇಲಿದೆ.
ಜುಲೈ 11ರಿಂದ ದಿನ ಬಿಟ್ಟು ದಿನ ನ್ಯಾಯಾಲಯ ಛೋಟಾ ರಾಜನ್ ಮತ್ತು ಇತರ ಮೂವರು ನಿವೃತ್ತ ಅಧಿಕಾರಿಗಳಾದ ಜಯಶ್ರೀ ದತ್ತಾತ್ರೇಯ ರಾಹಟೆ, ದೀಪಕ್ ನಟವರ್‌ಲಾಲ್, ಲಲಿತಾ ಲಕ್ಷ್ಮಣನ್ ಅವರ ವಿಚಾರಣೆ ನಡೆಸಲಿದೆ.
ಕೊಲೆ, ದರೋಡೆ ಸೇರಿದಂತೆ ಹಲವು ಪ್ರಕರಣಗಳಲ್ಲಿ ಬಂಧಿತನಾಗಿ ತಿಹಾರ್ ಜೈಲಿನಲ್ಲಿರುವ ಛೋಟಾ ರಾಜನ್, ಈ ಆರೋಪವನ್ನು ಅಲ್ಲಗಳೆದಿದ್ದಾನೆ.
Advertisement