
ನವದೆಹಲಿ: ಮೊಬೈಲ್ ಕರೆ ಸಂಪರ್ಕ ಕಡಿತಗೊಂಡರೆ ಹಾಗೂ ನಿಯಮಗಳಿಗೆ ಬದ್ಧರಾಗದ ಟೆಲಿಕಾಂ ಕಂಪನಿಗಳಿಗೆ 10 ಕೋಟಿ ರೂ.ವರೆಗೂ ದಂಡ ವಿಧಿಸುವ ಅವಕಾಶ ನೀಡುವಂತೆ ಕೇಂದ್ರ ಸರ್ಕಾರಕ್ಕೆ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಮನವಿ ಮಾಡಿದೆ.
ಜೊತೆಗೆ ಟ್ರಾಯ್ ನಿಗದಿಪಡಿಸಿರುವ ನಿಯಮಾವಳಿಗಳಿಗೆ ಬದ್ಧರಾಗದ ಟೆಲಿಕಾಂ ಕಂಪನಿಗಳ ಅಧಿಕಾರಿಗಳಿಗೆ ಎರಡು ವರ್ಷಗಳವರೆಗೂ ಜೈಲು ಶಿಕ್ಷೆ ವಿಧಿಸಲೂ ಅವಕಾಶ ನೀಡುವಂತೆ ಕೋರಲಾಗಿದೆ. ಇತ್ತೀಚೆಗಷ್ಟೇ ಪ್ರತಿ ಕಾಲ್ ಡ್ರಾಪ್ಗೂ ಗ್ರಾಹಕರಿಗೆ ಪರಿಹಾರ ನೀಡುವ ಸಂಬಂಧ ಟ್ರಾಯ್ ಪ್ರಸ್ತಾವನೆಯನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿತ್ತು. ಈ ಹಿನ್ನೆಲೆಯಲ್ಲಿ 1997ರ ಟ್ರಾಯ್ ಕಾಯ್ದೆಗೆ ವಿವಿಧ ತಿದ್ದುಪಡಿಗಳನ್ನು ಮಾಡುವಂತೆ ಟೆಲಿಕಾಂ ಸಚಿವಾಲಯಕ್ಕೆ ಮನವಿ ಮಾಡಿದೆ.
ಗ್ರಾಹಕರ ಹಿತಾಸಕ್ತಿ ಕಾಯುವುದು, ದೂರು ಪರಿಹಾರ ಮಾಡುವುದು ಹಾಗೂ ನಿಯಮಾವಳಿಗಳು ಮತ್ತು ಆದೇಶಗಳನ್ನು ಇನ್ನಷ್ಟು ಕಠಿಣವಾಗಿ ಜಾರಿಗೊಳಿಸಬಹುದು ಎಂದು ಟ್ರಾಯ್ ಸಮರ್ಥಿಸಿಕೊಂಡಿದೆ. ಟ್ರಾಯ್ ಶಿಫಾರಸು ತಲುಪಿರುವುದನ್ನು ಟೆಲಿಕಾಂ ಸಚಿವಾಲಯವೂ ಖಚಿತಪಡಿಸಿದೆ. 1997ರ ಟ್ರಾಯ್ ಕಾಯ್ದೆಯ 29ನೇ ಸೆಕ್ಷನ್ ತಿದ್ದುಪಡಿ ಮಾಡುವುದರ ಜತೆಗೆ 29ಎ, 29ಬಿ ಹಾಗೂ 29 ಸಿ ವಿಭಾಗವನ್ನೂ ಸೇರಿಸಬೇಕು ಎಂದು ಆಗ್ರಹಿಸಿದೆ. 29ನೇ ಸೆಕ್ಷನ್ನಲ್ಲಿ ದಂಡದ ವಿಚಾರವನ್ನು ನಮೂದಿಸಲಾಗಿದೆ.
ನೆಟ್ ನ್ಯೂಟ್ರಾಲಿಟಿ ವಿಚಾರ ಭಾರಿ ಚರ್ಚೆಗೊಳಗಾದಾಗ ಟ್ರಾಯ್ ಮಹತ್ವದ ನಿರ್ಧಾರ ಕೈಗೊಂಡಿತ್ತು. ಎಲ್ಲ ರೀತಿಯ ಡೇಟಾ ಬಳಕೆಗಳಿಗೂ ಸಮಾನ ಶುಲ್ಕ ನಿಗದಿಪಡಿಸುವುದನ್ನು ಖಚಿತಪಡಿಸುವ ನಿಟ್ಟಿನಲ್ಲಿ, ಮಹತ್ವದ ಆದೇಶ ಹೊರಡಿಸಿತ್ತು. ಇದರಿಂದ ಫೇಸ್ಬುಕ್ನ ಫ್ರೀ ಬೇಸಿಕ್ಸ್ ಹಾಗೂ ಏರ್ಟೆಲ್ ಜೀರೋ ಯೋಜನೆಗಳನ್ನು ಟ್ರಾಯ್ ಸ್ಥಗಿತಗೊಳಿಸಿತ್ತು.
ಕೆಲವು ವೆಬ್ಸೈಟ್ಗಳು ಅಥವಾ ಅಪ್ಲಿಕೇಶನ್ಗಳ ತಯಾರಕರ ಜತೆ ಟೆಲಿಕಾಂ ಕಂಪನಿಗಳು ಒಪ್ಪಂದ ಮಾಡಿಕೊಂಡು ಅವುಗಳಷ್ಟನ್ನೇ ಉಚಿತವಾಗಿ, ಡೇಟಾ ಶುಲ್ಕವಿಲ್ಲದೇ ನೀಡುವ ವ್ಯವಸ್ಥೆಯನ್ನು ಫ್ರೀ ಬೇಸಿಕ್ಸ್ ಹಾಗೂ ಏರ್ಟೆಲ್ ಜೀರೋ ಯೋಜನೆಯಲ್ಲಿ ರೂಪಿಸಲಾಗಿತ್ತು. ಈಗ, ಉಚಿತ ಇಂಟರ್ನೆಟ್ ಒದಗಿಸುವ ವ್ಯವಸ್ಥೆಯ ಬಗ್ಗೆ ಪ್ರಸ್ತಾವನೆಯನ್ನೂ ಟ್ರಾಯ್ ರೂಪಿಸಿದ್ದು, ಸಾರ್ವಜನಿಕ ಅಭಿಪ್ರಾಯ ಆಹ್ವಾನಿಸಿದೆ.
Advertisement