![ನಾಗರಿಕ ವಿಮಾನಯಾನದ ಹೊಸ ನೀತಿಗಳಿಗೆ ಕೇಂದ್ರ ಸಚಿವ ಸಂಪುಟದ ಒಪ್ಪಿಗೆ](http://media.assettype.com/kannadaprabha%2Fimport%2F2016%2F6%2F15%2Foriginal%2Funion-cabinet.jpg?w=480&auto=format%2Ccompress&fit=max)
ನವದೆಹಲಿ: ವಿಮಾನಯಾನ ದರ ಕಡಿತ, ರೀಫಂಡ್ ನಿಯಮಗಳ ಬದಲಾವಣೆ ಸೇರಿದಂತೆ ಹಲವು ಅಂಶಗಳನ್ನು ಹೊಂದಿದ್ದ ನಾಗರಿಕ ವಿಮಾನಯಾನದ ಹೊಸ ನೀತಿಗಳಿಗೆ ಕೇಂದ್ರ ಸಚಿವ ಸಂಪುಟ ಜೂ.15 ರಂದು ಒಪ್ಪಿಗೆ ಸೂಚಿಸಿದೆ.
ಜೂ.3 ರಂದು ನಾಗರಿಕ ವಿಮಾನಯಾನ ಸಚಿವಾಲಯ ಕೇಂದ್ರ ಸಚಿವ ಸಂಪುಟಕ್ಕೆ ಹೊಸ ನೀತಿಯನ್ನು ಕಳಿಸಿಕೊಟ್ಟಿತ್ತು. ಹೊಸ ನೀತಿಗಳಿಗೆ ಕೇಂದ್ರ ಸಂಪುಟ ಅಸ್ತು ನೀಡಿದ್ದು, ವಿಮಾನ ಪ್ರಯಾಣಿಕರಿಗೆ ಇದರಿಂದ ಹಲವು ಸೌಲಭ್ಯ ಸಿಗಲಿದೆ. 2014 ರ ನವೆಂಬರ್ ನಲ್ಲಿ ಮೊದಲ ಕರಡು ಪ್ರತಿಯನ್ನು ಸಿದ್ಧಪಡಿಸಿದ್ದ ಎನ್ ಡಿಎ ಸರ್ಕಾರ 2015 ರಲ್ಲಿ ಮತ್ತೊಂದು ಕರಡು ಪ್ರತಿಯನ್ನು ಸೇರಿಸಿ, ಹೊಸ ನೀತಿಯ ಅಂತಿಮ ಕರಡು ಪ್ರತಿಗೆ ಒಪ್ಪಿಗೆ ಪಡೆಯಲು 2016 ರ ಜೂ.3 ರಂದು ಕೇಂದ್ರ ಸಚಿವ ಸಂಪುಟದ ಮುಂದಿಟ್ಟಿತ್ತು.
ನಾಗರಿಕ ವಿಮಾನಯಾನ ಸಚಿವಾಲಯದ ಬೆಳವಣಿಗೆ ಪ್ರಸ್ತುತ ಶೇ.20 ರಷ್ಟಿದ್ದು ಬೆಳವಣಿಗೆ ದರವನ್ನು ಹೆಚ್ಚಿಸಲು ಹೊಸ ನೀತಿಗಳು ಸಹಕಾರಿಯಾಗಲಿವೆ ಎಂದು ವಿಶ್ಲೇಷಿಸಲಾಗಿದೆ. ಮೂಲಸೌಕರ್ಯ ಅಭಿವೃದ್ಧಿ ಕೇಂದ್ರ ಸರ್ಕಾರದ ಆದ್ಯತೆಯಾಗಿದ್ದು 2016 -17 ನೇ ಸಾಲಿನಲ್ಲಿ ವಿಮಾನ ನಿಲ್ದಾಣಗಳ ಅಭಿವೃದ್ಧಿ ಹಾಗೂ ಹೊಸ ವಿಮಾನ ನಿಲ್ದಾಣಗಳಿಗಾಗಿ ಸುಮಾರು 15,000 ಕೋಟಿ ಬಂಡವಾಳ ಹೂಡಲು ನಿರ್ಧರಿಸಿದೆ. ಇನ್ನು ರಜೆ ಹಾಗೂ ವಿಶೇಷ ದಿನಗಳಲ್ಲಿ ವಿಮಾನದರಗಳು ಅತಿಯಾಗಿ ಹೆಚ್ಚಳವಾಗುತ್ತಿದ್ದು ದರ ಏರಿಕೆಗೆ ಕಡಿವಾಣ ಹಾಕುವಂತೆ ಪ್ರಧಾನಿ ನರೇಂದ್ರ ಮೋದಿ ಅವರೂ ಸೂಚಿಸಿದ್ದಾರೆ. ಹೊಸ ನೀತಿಯಿಂದಾಗಿ ವಿಮಾನಯಾನ ದರ ನಿಯಂತ್ರಣವಾಗಲಿದ್ದು ಟಿಕೆಟ್ ರದ್ದತಿಗಾಗಿ ವಿಧಿಸಲಾಗುತ್ತಿದ್ದ ಶುಲ್ಕವೂ ಕಡಿಮೆಯಾಗಲಿದೆ. ಸರಕು( ಬ್ಯಾಗೇಜ್) ಶುಲ್ಕ ಕಡಿಮೆಗೊಳಿಸುವುದು, ಟಿಕೆಟ್ ರದ್ದುಗೊಳಿಸಿದ ಪ್ರಯಾಣಿಕರಿಗೆ ವಿಧಿಸಲಾಗುವ ಶುಲ್ಕವನ್ನು ಕಡಿಮೆಗೊಳಿಸಿ 15 ದಿನಗಳಲ್ಲಿ ಹಣ ವಾಪಸ್ ಪಾವತಿ ಮಾಡುವುದು( ಏಜೆಂಟ್ ಪೋರ್ಟಲ್ ಸೇರಿದಂತೆ ಯಾವುದೇ ಮೂಲಕ ಟಿಕೆಟ್ ಕಾಯ್ದಿಸಿದ್ದರೂ ಅದಕ್ಕೆ ಅನ್ವಯ) ಸೇರಿದಂತೆ ಹಲವು ಪ್ರಯಾಣಿಕ ಸ್ನೇಹಿ ಕ್ರಮಗಳು ಹೊಸ ನೀತಿಯ ಭಾಗವಾಗಿ ಜಾರಿಗೊಳ್ಳಲಿವೆ.
Advertisement