ಸೋನಿಯಾ ಆಕ್ಷೇಪಾರ್ಹ ಫೋಟೋ ಸಂಬಂಧ ಘರ್ಷಣೆ: 1 ಸಾವು, 6 ಮಂದಿಗೆ ಗಾಯ

ವಾಟ್ಸಾಪ್‌ನಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಪಾತ್ರೆ ತೊಳೆಯುವ ಆಕ್ಷೇಪಾರ್ಹ ಫೋಟೋ ಕಾಣಿಸಿಕೊಂಡ ಕಾರಣ ಭುಗಿಲೆದ್ದ ಗುಂಪು...
ಸೋನಿಯಾ ಗಾಂಧಿ
ಸೋನಿಯಾ ಗಾಂಧಿ
ಜಬಲ್ಪುರ: ವಾಟ್ಸಾಪ್‌ನಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಪಾತ್ರೆ ತೊಳೆಯುವ ಆಕ್ಷೇಪಾರ್ಹ ಫೋಟೋ ಕಾಣಿಸಿಕೊಂಡ ಕಾರಣ ಭುಗಿಲೆದ್ದ ಗುಂಪು ಘರ್ಷಣೆಯಲ್ಲಿ 33 ವರ್ಷದ ಓರ್ವ ಮೃತಪಟ್ಟಿದ್ದು, ಆರು ಮಂದಿ ಗಂಭೀರವಾಗಿ ಗಾಯಗೊಂಡ ಘಟನೆ ಮಧ್ಯಪ್ರದೇಶದ ಜಬಲ್ಪುರದಲ್ಲಿ ನಡೆದಿದೆ.
ಗುಂಪು ಘರ್ಷಣೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಉಮೇಶ್‌ ವರ್ಮಾ ಸೇರಿದಂತೆ ಏಳು ಮಂದಿಯನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ವರ್ಮಾ ಅವರು ಕೊನೆಯುಸಿರೆಳೆದಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಇಂದ್ರಜಿತ್‌ ಬಲ್ಸಾವರ್‌ ಅವರು ತಿಳಿಸಿದ್ದಾರೆ.
ಕಾಂಗ್ರೆಸ್‌ ಕಾರ್ಪೊರೇಟರ್‌ ಜತಿನ್‌ ರಾಜ್‌ ಅವರ ಪ್ರಕಾರ, ವಾಟ್ಸಾಪ್‌ನಲ್ಲಿ ತಮ್ಮ ನಾಯಕಿ ಸೋನಿಯಾ ಗಾಂಧಿಯ ಪಾತ್ರೆ ತೊಳೆಯುವ ಫೋಟೋ ಕಾಣಿಸಿಕೊಂಡಿದ್ದು, ಈ ಬಗ್ಗೆ ದೂರು ನೀಡಲು ವಿಜಯ ನಗರ ಪೊಲೀಸ್‌ ಠಾಣೆಗೆ ತೆರಳಿದ್ದರು. ಇದೇ ವೇಳೆ ಎದುರಾಳಿ ಗುಂಪು ಕೂಡ ದೂರು ನೀಡಲು ಅಲ್ಲಿಗೆ ಬಂದಿತ್ತು. ಈ ಸಂದರ್ಭದಲ್ಲಿ ಉಭಯ ಗುಂಪುಗಳು ಠಾಣೆಯೊಳಗೇ ಪರಸ್ಪರ ಹೊಡೆದಾಡಿಕೊಂಡಿದ್ದಾರೆ.
ಠಾಣೆಯಲ್ಲಿದ್ದ ಕಡಿಮೆ ಸಂಖ್ಯೆಯ ಪೊಲೀಸರಿದ್ದ ಕಾರಣ ಸಮೀಪದ ಇತರ ಠಾಣೆಗಳಿಗೆ ಸುದ್ದಿ ತಲುಪಿಸಿ ಅಲ್ಲಿಂದ ಹೆಚ್ಚುವರಿ ಪೊಲೀಸರನ್ನು ತಮ್ಮ ಠಾಣೆಗೆ ಕರೆಸಿಕೊಂಡು ಹಿಂಸೆಗೆ ತಿರುಗಿದ್ದ ಗುಂಪುಗಳನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಆದರೆ ತಮ್ಮ ಠಾಣೆಯೊಳಗೆ ಯಾವುದೇ ಗುಂಪು ಕಾಳಗ ನಡೆದಿಲ್ಲ ಎಂದು ವಿಜಯ ನಗರ ಠಾಣಾಧಿಕಾರಿ ಹೇಳಿದ್ದಾರೆ.
ಕಾಂಗ್ರೆಸ್‌ ಕಾರ್ಪೊರೇಟರ್‌ ರಾಜ್‌ ಅವರು "ವಿಜಯ ನಗರ ಫ್ರೆಂಡ್ಸ್‌' ಎಂಬ ಹೆಸರಿನಲ್ಲಿ ವಾಟ್ಸಾಪ್‌ನಲ್ಲಿ ಸಮೂಹವೊಂದನ್ನು ರೂಪಿಸಿಕೊಂಡಿದ್ದು ತಮ್ಮ ಪ್ರದೇಶದ ಜನರೊಂದಿಗೆ ಸಂಪರ್ಕದಲ್ಲಿದ್ದರು.
ಪ್ರಶಾಂತ್‌ ನಾಯಕ್‌ ಎಂಬವರು ಈ ವಾಟ್ಸಾಪ್‌ ಗ್ರೂಪ್‌ನಲ್ಲಿ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಪಾತ್ರೆ ತೊಳೆವ ಫೋಟೋವನ್ನು ಹಾಕಿ ಅದಕ್ಕೆ "ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್‌ ಅಧ್ಯಕ್ಷೆಯನ್ನು ಈ ಸ್ಥಿತಿಗೆ ತಂದಿದ್ದಾರೆ' ಎಂಬ ವ್ಯಂಗ್ಯದ ಮಾತನ್ನು ಬರೆದಿದ್ದರು ಎನ್ನಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com