
ತಿರುವನಂತಪುರ: ದೆಹಲಿಯ ನಿರ್ಭಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ನೆನಪಿಸುವಂತಹ ಘಟನೆ ಕೇರಳದಲ್ಲಿ ಎರಡು ತಿಂಗಳ ಹಿಂದೆ ನಡೆದಿತ್ತು. ಅದು, 28 ವರ್ಷದ ಕಾನೂನು ವಿದ್ಯಾರ್ಥಿನಿ ಜಿಶಾ ಅತ್ಯಾಚಾರ ಮತ್ತು ಕೊಲೆ ಪ್ರಕರಣ. ಈ ಘಟನೆಗೆ ಸಂಬಂಧಪಟ್ಟಂತೆ ಅಮಿಯೂರ್ ಇಸ್ಲಾಂ ಎಂಬ ಆರೋಪಿಯನ್ನು ಬಂಧಿಸಲಾಗಿದ್ದು ಇದರಿಂದ ಹಲವು ವಿಷಯಗಳು ಇದೀಗ ಮಾಧ್ಯಮಗಳಲ್ಲಿ ಮತ್ತೆ ಸುದ್ದಿಯಾಗುತ್ತಿವೆ. ಘಟನೆ ಮತ್ತು ಅದಕ್ಕೆ ಸಂಬಂಧಪಟ್ಟ ಆರೋಪಿಯ ಪತ್ತೆಯ ಸಂಪೂರ್ಣ ಹಿನ್ನೆಲೆ ಇಲ್ಲಿದೆ:
ಯಾರಿವರು ಜಿಶಾ?
ಕೇರಳದ ಎರ್ನಾಕುಲಂ ಜಿಲ್ಲೆಯ ಪೆರುಂಬವೂರಿನ ಜಿಶಾ ಕಾನೂನು ವಿದ್ಯಾರ್ಥಿನಿ. ಕೊಲೆಯಾಗಿದ್ದು ಏಪ್ರಿಲ್ 28ರಂದು ಆಕೆಯ ಮನೆಯಲ್ಲಿ. ಪರೀಕ್ಷೆ ಬರೆಯಲು ಮನೆಯಲ್ಲಿ ತಯಾರಿ ನಡೆಸುತ್ತಿದ್ದ ಜಿಶಾಳ ಮೇಲೆ ಭೀಕರವಾಗಿ ಹಲ್ಲೆ ನಡೆಸಿ ಅತ್ಯಾಚಾರವೆಸಗಿ ಕೊಲೆ ಮಾಡಲಾಗಿತ್ತು.
ಪ್ರಕರಣ ಯಾಕೆ ಅಷ್ಟೊಂದು ಮಹತ್ವ ಪಡೆಯಿತು?
ಕೊಲೆಯಾದ ಜಿಶಾಳ ಮೈಮೇಲಿನ ರಕ್ತಸಿಕ್ತ ಗಾಯದ ಗುರುತುಗಳು 4 ವರ್ಷಗಳ ಹಿಂದೆ ದೆಹಲಿಯಲ್ಲಿ ನಡೆದ ಇಡೀ ರಾಷ್ಟ್ರದ ಗಮನ ಸೆಳೆದಿದ್ದ ನಿರ್ಭಯಾ ಅತ್ಯಾಚಾರ, ಕೊಲೆ ಕೇಸನ್ನು ಹೋಲುತ್ತಿತ್ತು. ಮೊನ್ನೆ ಕೇರಳ ರಾಜ್ಯ ವಿಧಾನಸಭೆ ಚುನಾವಣೆ ಸಮಯದಲ್ಲಿ ಈ ಘಟನೆ ನಡೆದಿದ್ದರಿಂದ ಆಗ ಅಧಿಕಾರದಲ್ಲಿದ್ದ ಯುಡಿಎಫ್ ಸರ್ಕಾರವನ್ನು ಹೊಡೆದುರುಳಿಸಲು ವಿರೋಧ ಪಕ್ಷ ಎಲ್ ಡಿಎಫ್ ಗೆ ಪ್ರಮುಖ ಅಸ್ತ್ರವಾಗಿತ್ತು. ಇದು ಒಂದು ಪ್ರಮುಖ ಚುನಾವಣಾ ಪ್ರಚಾರದ ವಿಷಯವಾಗಿ ಮಹತ್ವ ಪಡೆಯಿತು.
ಮರಣೋತ್ತರ ಪರೀಕ್ಷೆ ಹೇಳಿದ್ದೇನು?
ಜಿಶಾಳ ಮೇಲೆ ಲೈಂಗಿಕ ಹಲ್ಲೆ ನಡೆಸಿ ಭೀಕರವಾಗಿ ಹತ್ಯೆ ಮಾಡಿದ ಗುರುತುಗಳು ಆಕೆಯ ಕುತ್ತಿಗೆ, ಹೊಟ್ಟೆ, ಗುಪ್ತಾಂಗದ ಹೊರ ಭಾಗಗಳಲ್ಲಿ ಗುರುತು ಇತ್ತು. ಕೊನೆಗೆ ಆರೋಪಿಗಳು ಜಿಶಾಳನ್ನು ಉಸಿರುಗಟ್ಟಿಸಿ ಸಾಯಿಸಿದ್ದಾರೆ ಎಂದು ವಿಧಿವಿಜ್ಞಾನ ಪ್ರಯೋಗಾಲಯದ ಮರಣೋತ್ತರ ಪರೀಕ್ಷೆ ಹೇಳಿತ್ತು.
ತನಿಖೆ ಹೇಗೆ ನಡೆಯಿತು?
ಜಿಶಾ ಕೊಲೆಯಾದ ಸ್ಥಳದಲ್ಲಿ ಸಿಕ್ಕಿದ ಸಾಕ್ಷಿಗಳನ್ನು ಆಧರಿಸಿ ಮೇ 4ರಂದು ಪೊಲೀಸರು ಶಂಕಿತನ ರೇಖಾಚಿತ್ರ ಬಿಡುಗಡೆ ಮಾಡಿದ್ದರು. ಆರೋಪಿಯ ಇನ್ನಷ್ಟು ಹೊಸ ನೋಟದ ರೇಖಾಚಿತ್ರವನ್ನು ಪೊಲೀಸರು ಮತ್ತೆ ಒಂದು ತಿಂಗಳು ಬಿಟ್ಟು ಬಿಡುಗಡೆ ಮಾಡಿದರು. ಇಬ್ಬರು ಶಂಕಿತರನ್ನು ಬಂಧಿಸಲಾಯಿತು. ಶಂಕಿತರು ಜಿಶಾಗೆ ಗೊತ್ತಿದ್ದವರೇ ಇರಬೇಕೆಂದು ತನಿಖಾಧಿಕಾರಿಗಳಿಗೆ ಸಂಶಯ ಬಂದಿತು.
ಆರೋಪಿಗಳನ್ನು ಕಂಡುಹಿಡಿದದ್ದು ಹೇಗೆ?
ಜಿಶಾಳ ಮನೆಯ ಹತ್ತಿರದ ಅಂಗಡಿಯಲ್ಲಿನ ಸಿಸಿಟಿವಿಯಲ್ಲಿ ದಾಖಲಾದ ವಿಡಿಯೋಗಳು ಮತ್ತು ಜಿಶಾಳ ದೇಹದ ಮರಣೋತ್ತರ ಪರೀಕ್ಷೆಯ ವರದಿ ಪೊಲೀಸರಿಗೆ ಆರೋಪಿಗಳನ್ನು ಹಿಡಿಯುವಲ್ಲಿ ನೆರವಾಯಿತು. ಜಿಶಾಳ ಮನೆಯ ಹತ್ತಿರ ರಕ್ತದಲ್ಲಿ ನೆನೆದು ಹೋಗಿದ್ದ ಚಪ್ಪಲಿಗಳು ಮತ್ತು ಹತ್ತಿರದ ಸ್ಟುಡಿಯೋವೊಂದರಲ್ಲಿ ಜಿಶಾ ಮತ್ತು ಇಸ್ಲಾಂ ಜೊತೆಗೆ ನಿಂತು ತೆಗೆದ ಫೋಟೋ ಸುಳಿವು ನೀಡಿತು.
ಇವು ಹೇಗೆ ಅಮಿಯೂರ್ ಇಸ್ಲಾಂ ಆರೋಪಿ ಎಂದು ಹೇಳಿತು?
ಜಿಶಾಳ ದೇಹದಲ್ಲಿದ್ದ ರಕ್ತ ಮತ್ತು ಜೊಲ್ಲಿನ ಮಾದರಿ ಪೊಲೀಸರಿಗೆ ಸಿಕ್ಕಿತು. ಸಂಶಯದ ಮೇಲೆ ಅಮಿಯೂರ್ ಇಸ್ಲಾಂನನ್ನು ವಶಕ್ಕೆ ಪಡೆದ ಪೊಲೀಸರು ಡಿಎನ್ಎ ಹೊಂದಿಕೆಯಾಗುತ್ತದೆಯೇ ಎಂದು ಪರೀಕ್ಷೆ ಮಾಡಿಸಿದರು. ಅದು ಹೊಂದಿಕೆಯಾಯಿತು. ಇದರಿಂದ ಆತನೇ ಆರೋಪಿ ಎಂದು ಪೊಲೀಸರು ಕಂಡುಹಿಡಿದರು.
ಯಾರೀತ ಆರೋಪಿ?
24 ವರ್ಷದ ಅಮಿಯೂರ್ ಇಸ್ಲಾಂ ಅಸ್ಸಾಂ ಮೂಲದ ವಲಸೆ ಕಾರ್ಮಿಕ. ಜಿಶಾಳ ಕುಟುಂಬದವರು ಹೊಸ ಮನೆ ಕಟ್ಟಿಸುವ ವೇಳೆ ಆಕೆಗೆ ಪರಿಚಯಸ್ಥನಾದ. ಮನೆ ನಿರ್ಮಾಣ ಕೆಲಸ ಮಾಡುವಾಗ ಆತನೊಂದಿಗೆ ಜಿಶಾಳ ಮನೆಯವರಿಗೆ ಒಮ್ಮೆ ಜಗಳವಾಗಿತ್ತು.
ಕೊಲೆಯಾದ ದಿನ ನಡೆದಿದ್ದೇನು?
ಜಿಶಾಳ ಕೊಲೆಯಾದ ದಿವಸ ಏನೆಲ್ಲಾ ಘಟನೆಗಳು ನಡೆದವು ಎಂಬ ಬಗ್ಗೆ ವಿವರಗಳು ಒಂದೊಂದಾಗಿ ಹೊರಬರುತ್ತಿವೆ. ಮಾಧ್ಯಮ ವರದಿಗಳ ಪ್ರಕಾರ, ಅಂದು ಅಮಿಯೂರ್ ಇಸ್ಲಾಂ, ಮಹಿಳೆಯರು ಬಳಸುತ್ತಿದ್ದ ಶೌಚಾಲಯಕ್ಕೆ ತಪ್ಪಿ ಹೋಗಿದ್ದನಂತೆ. ಅವನನ್ನು ಹೊಡೆದು ಹೊರ ಕಳುಹಿಸಿದ್ದರು. ಅದಕ್ಕೆ ಜಿಶಾ ಅಮಿಯೂರ್ ನನ್ನು ತಮಾಷೆ ಮಾಡಿದ್ದಳಂತೆ. ಪ್ರತೀಕಾರ ತೀರಿಸಲೆಂದು ಮದ್ಯ ಸೇವಿಸಿದ ಮತ್ತಿನಲ್ಲಿದ್ದ ಇಸ್ಲಾಂ ಜಿಶಾಳ ಮೇಲೆ ದಾಳಿ ಮಾಡಿದ. ಇಬ್ಬರ ನಡುವೆ ಮಾರಾಮಾರಿಯಾಗಿ ಜಿಶಾ ಆತನಿಗೆ ಹೊಡೆದಿದ್ದಾಳೆ. ಕುಪಿತನಾದ ಇಸ್ಲಾಂ ಆಕೆಯ ಮೇಲೆ ಹಲ್ಲೆ ನಡೆಸಿ ಗುಪ್ತಾಂಗಗಳಿಗೆ, ಮೈ ಮೇಲೆ ಭೀಕರವಾಗಿ ಗಾಯಗೊಳಿಸಿದ್ದಾನೆ.
ಪೊಲೀಸರು ಆರೋಪಿಯನ್ನು ಹಿಡಿದಿದ್ಹೇಗೆ?
ಜಿಶಾಳನ್ನು ಕೊಲೆ ಮಾಡಿದ ನಂತರ ಇಸ್ಲಾಂ ಪೆರಂಬವೂರಿನಿಂದ ತನ್ನ ಊರಾದ ಅಸ್ಸಾಂಗೆ ಓಡಿಹೋಗಿದ್ದ. ಸ್ವಲ್ಪ ದಿನ ಅಲ್ಲಿದ್ದು ಬಳಿಕ ತಮಿಳುನಾಡಿನ ಕಂಚೀಪುರಂಗೆ ಹೋಗಿ ಅಲ್ಲಿ ಕೂಲಿ ಕೆಲಸ ಮಾಡಲು ಆರಂಭಿಸಿದ. ಪೊಲೀಸರು ನಿನ್ನೆ ಆತನನ್ನು ಕಂಚೀಪುರಂನ ಸಿಂಗದಿವಕ್ಕಮ್ ನಲ್ಲಿ ಹಿಡಿದಿದ್ದಾರೆ.
Advertisement