ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್

ಸಿಖ್ ವಿರೋಧಿ ದಂಗೆ - ಕೇಂದ್ರದ ವಿಶೇಷ ತನಿಖಾ ದಳ ಕಣ್ಣೊರೆಸುವ ತಂತ್ರ: ಕೇಜ್ರಿವಾಲ್

೧೯೮೪ ರ ಸಿಖ್ ವಿರೋಧಿ ದಂಗೆಯ ಮರುತನಿಖೆ ನಡೆಸಲು ಕೇಂದ್ರ ಸರ್ಕಾರ ರಚಿಸಿದ್ದ ವಿಶೇಷ ತನಿಖಾ ದಳ ಕಣ್ಣೊರೆಸುವ ತಂತ್ರ ಎಂದು ಆರೋಪಿಸಿದ್ದಾರೆ ದೆಹಲಿ ಮುಖ್ಯಮಂತ್ರಿ
Published on

ನವದೆಹಲಿ: ೧೯೮೪ ರ ಸಿಖ್ ವಿರೋಧಿ ದಂಗೆಯ ಮರುತನಿಖೆ ನಡೆಸಲು ಕೇಂದ್ರ ಸರ್ಕಾರ ರಚಿಸಿದ್ದ ವಿಶೇಷ ತನಿಖಾ ದಳ ಕಣ್ಣೊರೆಸುವ ತಂತ್ರ ಎಂದು ಆರೋಪಿಸಿದ್ದಾರೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್.

ಪ್ರಧಾನಿ ನರೇಂದ್ರ ಮೋದಿಗೆ ಬರೆದಿರುವ ಪತ್ರದಲ್ಲಿ ಹಾಗೂ ಸೋಮವಾರ ಪತ್ರಿಕೆಗಳಲ್ಲಿ ನೀಡಿರುವ ಜಾಹೀರಾತುಗಳಲ್ಲಿ, ಆಮ್ ಆದ್ಮಿ ಪಕ್ಷದ ಸರ್ಕಾರ ಮೊದಲ ಬಾರಿಗೆ ನಡೆಸಿದ ೪೯ ದಿನದ ಆಡಳಿತದಲ್ಲಿ, ಸಿಖ್ ವಿರೋಧಿ ದಂಗೆಯಾ ಮರುತನಿಖೆಗಾಗಿ ವಿಶೇಷ ತನಿಖಾ ದಳ ರಚಿಸಿ ತಪ್ಪಿತಸ್ಥರನ್ನು ಕಟಕಟೆಯಲ್ಲಿ ನಿಲ್ಲಿಸಲು ಸಂಪುಟ ನಿರ್ಣಯ ಕೈಗೊಂಡಿತ್ತು.

"ಆದರೆ ದುರದೃಷ್ಟವಶಾತ್ ಈ ನಿರ್ಧಾರವನ್ನು ಅನುಷ್ಠಾನಗೊಳಿಸಲು ನಮ್ಮ ಸರ್ಕಾರ ಹೆಚ್ಚು ದಿನ ಉಳಿಯಲಿಲ್ಲ. ಎಸ್ ಐ ಟಿ ರಚನೆಗಾಗಿ ನಮ್ಮ ಪ್ರಣಾಳಿಕೆಯಲ್ಲಿಯೂ ತಿಳಿಸಿದ್ದೆವು" ಎಂದು ಪತ್ರದಲ್ಲಿ ಹೇಳಿದ್ದಾರೆ.

ಆದರೆ ತಾವು ಮುಖ್ಯಮಂತ್ರಿಯಾಗಿ ಫೆಬ್ರವರಿ ೨೦೧೫ರಲ್ಲಿ ಎರಡನೆ ಬಾರಿಗೆ ಅಧಿಕಾರ ಸ್ವೀಕರಿಸುವುದಕ್ಕೂ ೨ ದಿನ ಮುಂಚಿತವಾಗಿ ಕೇಂದ್ರ ಸರ್ಕಾರ ಎಸ್ ಐ ಟಿ ರಚನೆ ಮಾಡಿ ನಮ್ಮ ಸರ್ಕಾರ ವಿಶೇಷ ತನಿಖಾ ದಳ ರಚಿಸದಂತೆ ನೋಡಿಕೊಳ್ಳಲಾಯಿತು ಎಂದು ದೂರಿದ್ದಾರೆ.

"ನಾನು ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವುದಕ್ಕೂ ಎರಡು ದಿನ ಮುಂಚಿತವಾಗಿ ಕೇಂದ್ರ ಸರ್ಕಾರ ಫೆಬ್ರವರಿ ೧೨, ೨೦೧೫ರಂದು ಎಸ್ ಐ ಟಿ ರಚನೆ ಮಾಡಿತು. ಈ ತಂಡ ಆರು ತಿಂಗಳೊಳಗೆ ವರದಿ ನೀಡಬೇಕಿತ್ತು. ಆದರೆ ಒಂದೂವರೆ ವರ್ಷ ಕಳೆದರು ಯಾವುದೇ ಪ್ರಗತಿಯಿಲ್ಲ. ಈ ಎಸ್ ಐ ಟಿ ರಚಿಸಿದ್ದೇ ಕಣ್ಣೊರೆಸುವ ತಂತ್ರವಾಗಿ ಮತ್ತು ನಮ್ಮ ಸರ್ಕಾರ ಪರಿಣಾಮಕಾರಿ ಎಸ್ ಐ ಟಿ ರಚಿಸುವುದರಿಂದ ತಡೆಯುವುದಕ್ಕಾಗಿ ಎಂದು ಜನರ ಮನಸ್ಸಿಗೆ ಈಗ ತಿಳಿಯುತ್ತಿದೆ" ಎಂದು ಅವರು ಪತ್ರದಲ್ಲಿ ಹೇಳಿದ್ದಾರೆ.

"ನಿಮ್ಮ ಎಸ್ ಐ ಟಿ ಏನಾದರು ಮಾಡುವಂತೆ ಮಾಡಿ ಎಂದು ನಿಮನ್ನು (ಮೋದಿ) ಆಗ್ರಹಿಸುತ್ತೇನೆ ಅಥವಾ ಅದನ್ನು ಮುಚ್ಚಿಹಾಕಿ ನಮಗೆ ಸರಿಯಾದ ವಿಶೇಷ ತನಿಖಾ ದಳವನ್ನು ರಚಿಸಿ ಸಂತ್ರಸ್ತರಿಗೆ ನ್ಯಾಯ ಕೊಡಿಸಲು ಅವಕಾಶ ನೀಡಿ" ಎಂದು ಕೂಡ ಅವರು ಹೇಳಿದ್ದಾರೆ.

ಕೇಂದ್ರ ಸರ್ಕಾರ ರಚಿಸಿರುವ ವಿಶೇಷ ತನಿಖಾ ದಳ ದೆಹಲಿಯಲ್ಲಿ ನಡೆದ ಸಿಖ್ ವಿರೋಧಿ ದಂಗೆಯ ೭೫ ಪ್ರಕರಣಗಳನ್ನು ಮರು ತನಿಖೆ ನಡೆಸುವುದಾಗಿ ಹೇಳಿತ್ತು.


Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com