
ನವದೆಹಲಿ: ತಮ್ಮ ೪೬ನೇ ಜನ್ಮ ದಿನದ ನಂತರ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಸಣ್ಣ ಪ್ರವಾಸಕ್ಕಾಗಿ ದೇಶದಿಂದ ಹೊರಗೆ ಹೋಗುವುದಾಗಿ ಸೋಮವಾರ ಟ್ವಿಟ್ಟರ್ ಮೂಲಕ ತಿಳಿಸಿದ್ದಾರೆ. ಆದರೆ ಯಾವ ಜಾಗಕ್ಕೆ ಪ್ರವಾಸ ತೆರಳಲಿದ್ದಾರೆ ಎಂದು ಸ್ಪಷ್ಟಪಡಿಸಿಲ್ಲ.
"ಸಣ್ಣ ಪ್ರವಾಸಕ್ಕಾಗಿ ಕೆಲವು ದಿನಗಳಿಗೆ ದೇಶದಿಂದ ಹೊರಗೆ ಹೋಗಲಿದ್ದೇನೆ. ನೆನ್ನೆ(ಭಾನುವಾರ) ಭೇಟಿ ಮಾಡಿ ಹರಸಿದ ಎಲ್ಲರಿಗೂ ಮತ್ತೊಮ್ಮೆ ಧನ್ಯವಾದಗಳು. ನಿಮ್ಮ ಪ್ರೀತಿಗೆ ಆಭಾರಿಯಾಗಿದ್ದೇನೆ" ಎಂದು ಟ್ವೀಟ್ ಮಾಡಿದ್ದಾರೆ.
ತಮ್ಮ ಜನ್ಮದಿನವಾದ ಭಾನುವಾರದಂದು ಕಾಂಗ್ರೆಸ್ ಪಕ್ಷದ ಮುಖ್ಯ ಕಚೇರಿಯಲ್ಲಿ ನೂರಾರು ಕಾರ್ಯಕರ್ತರನ್ನು ರಾಹುಲ್ ಭೇಟಿ ಮಾಡಿದ್ದರು.
ಬಜೆಟ್ ಸಮಯವಾದ ಫೆಬ್ರವರಿ-ಏಪ್ರಿಲ್ ೨೦೧೫ರ ಸಮಯದಲ್ಲಿ ೬೦ ದಿನಗಳ ಪ್ರವಾಸ ತೆರಳಿದ್ದ ರಾಹುಲ್ ಗಾಂಧಿ ವಿರೋಧ ಪಕ್ಷಗಳಿಂದ ತೀವ್ರ ಟೀಕೆಗೆ ಗುರಿಯಾಗಿದ್ದರು. ಅಲ್ಲದೆ ಡಿಸೆಂಬರ್ ಸಮಯದಲ್ಲಿ ಹೊಸ ವರ್ಷಕ್ಕೆ ಮತ್ತೆ ಪ್ರವಾಸಕ್ಕೆ ತೆರಳಿದ್ದರು. ಇದೇ ಮೊದಲ ಬಾರಿಗೆ ತಮ್ಮ ಪ್ರವಾಸವನ್ನು ಟ್ವಿಟ್ಟರ್ ಮೂಲಕ ಸಾರ್ವಜನಿಕಗೊಳಿಸಿದ್ದಾರೆ.
Advertisement