ಜ್ಯೂನಿಯರ್ ವಿದ್ಯಾರ್ಥಿನಿಗೆ ಟಾಯ್ಲೆಟ್ ಕ್ಲೀನರ್ ಕುಡಿಸಿ ರ್ಯಾಗಿಂಗ್

ಕೇರಳದ ವಿದ್ಯಾರ್ಥಿನಿ ಅಸ್ವಥಿ (19) ಎಂಬಾಕೆಗೆ ಮಹಿಳಾ ವಸತಿ ನಿಲಯದಲ್ಲಿ ಅವಳ ರಾಜ್ಯದವರೇ ಆದ ಹಿರಿಯ ಸಹಪಾಠಿಗಳು ರ್ಯಾಗಿಂಗ್ ನೆಪದಲ್ಲಿ ಶೌಚಾಲಯ ಶುದ್ಧಿಗೆ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ತಿರುವನಂತಪುರ: ಕರ್ನಾಟಕದ ಕಲಬುರಗಿ ನರ್ಸಿಂಗ್ ಕಾಲೇಜಿನಲ್ಲಿ ಅಧ್ಯಯನ ಮಾಡಲು ತೆರಳಿದ್ದ ಕೇರಳದ ವಿದ್ಯಾರ್ಥಿನಿ ಅಸ್ವಥಿ (19) ಎಂಬಾಕೆಗೆ ಮಹಿಳಾ ವಸತಿ ನಿಲಯದಲ್ಲಿ ಅವಳ ರಾಜ್ಯದವರೇ ಆದ ಹಿರಿಯ ಸಹಪಾಠಿಗಳು ರ್ಯಾಗಿಂಗ್ ನೆಪದಲ್ಲಿ ಶೌಚಾಲಯ ಶುದ್ಧಿಗೆ ಬಳಸುವ ಕ್ಲೀನರ್ ಕುಡಿಸಿದ್ದರಿಂದ ತೀವ್ರ ಅಸ್ವಸ್ಥಗೊಂಡಿರುವ ಘಟನೆ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.

ಕಲಬುರಗಿಯ ಅಲ್‌ ಖಮರ್‌ ಕಾಲೇಜಿನ ವಸತಿ ನಿಲಯದಲ್ಲಿ ಮೇ ಒಂಬತ್ತರಂದು ತಮ್ಮ ಮಗಳ ಮೇಲೆ ಹಲ್ಲೆ ನಡೆದಿತ್ತು ಎಂದು ವಿದ್ಯಾರ್ಥಿನಿಯ ಪೋಷಕರು ಆರೋಪಿಸಿದ್ದರೂ ಕಾಲೇಜು ಆಡಳಿತ ಮಂಡಳಿ ಅದನ್ನು ಅಲ್ಲಗಳೆದಿದೆ.

ಸದ್ಯ ಅಸ್ವಥಿ ತಿರುವನಂತಪುರದ ಕೋಜಿಕೋಡ್ ಮೆಡಿಕಲ್ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಕಲಬುರಗಿಯ ಅಲ್ ಖಮರ್ ಕಾಲೇಜಿನಲ್ಲಿ ನರ್ಸಿಂಗ್ ಕೋರ್ಸ್ ಅಧ್ಯಯನಕ್ಕಾಗಿ ತೆರಳಿದ್ದರು. ಘಟನೆ ನಡೆದು 5 ದಿನಗಳ ನಂತರ ತೀವ್ರ ಅಸ್ವಸ್ಥಗೊಂಡ ಅಸ್ವಥಿಯನ್ನು ಕಾಲೇಜು ಆಡಳಿತ ಮಂಡಳಿ ಮನೆಗೆ ಕಳಿಸಿಕೊಟ್ಟಿದೆ. ಆಕೆಯ ಪರಿಸ್ಥಿತಿ ಹದಗೆಟ್ಟಿದ್ದರಿಂದ ಹೆಚ್ಚಿನ ಚಿಕಿತ್ಸೆಗೆ ತ್ರಿಶೂರ್​ನ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಬಳಿಕ ಆರೋಗ್ಯ ಸ್ಥಿತಿ ಕೊಂಚ ಸುಧಾರಿಸಿದ ಕಾರಣ ಕೋಜಿಕೋಡ್ ಆಸ್ಪತ್ರೆಗೆ ರವಾನಿಸಲಾಗಿದೆ.

ಆಕೆಯನ್ನು ಪರೀಕ್ಷಿಸಿದ ವೈದ್ಯರು ಟಾಯ್ಲೆಟ್ ಕ್ಲೀನರ್​ನಿಂದ ಆಕೆಯ ಗಂಟಲಿಗೆ ಹಾನಿಯಾಗಿದ್ದು, ಶಸ್ತ್ರಚಿಕಿತ್ಸೆ ಮಾಡಬೇಕಾಗಬಹುದು ಎಂದಿದ್ದಾರೆ. ಅಸ್ವಥಿ ತನ್ನ ಅವಸ್ಥೆಗೆ ಕಾರಣವಾದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೇರಳ ಮುಖ್ಯಮಂತ್ರಿ ಪಿನರಾಯಿ ವಿಜಯನ್​ಗೆ ಮನವಿ ಮಾಡಿಕೊಂಡಿದ್ದಾರೆ.

ತ್ರಿಶೂರ್‌ ಜಿಲ್ಲೆಯ ಎಡಪ್ಪಾಲ್‌ ಮೂಲದ ಬಿಎಸ್ಸಿ ವಿದ್ಯಾರ್ಥಿನಿ ಘಟನೆಯ ಬಗ್ಗೆ ಹೇಳಿಕೆ ನೀಡಿದ್ದಾರೆ. ಕೇರಳ ಮೂಲದವರೂ ಸೇರಿದಂತೆ ಹಿರಿಯ ವಿದ್ಯಾರ್ಥಿನಿಯರು ರ್‍ಯಾಗಿಂಗ್‌ ಮಾಡಿ ಶೌಚಾಲಯ ಶುಚಿಕಾರಕವನ್ನು ಒತ್ತಾಯಪೂರ್ವಕ ಕುಡಿಸಿದ್ದರು.  ಅಲ್ಲದೆ ಅವರು ಮಾನಸಿಕ ಕಿರುಕುಳವನ್ನೂ ನೀಡಿದ್ದರು. ನಂತರ ರಕ್ತ ವಾಂತಿಯಾಗಿ ಕಲ್ಬುರ್ಗಿಯ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿತ್ತು. ಇದೇ ವೇಳೆ ಸ್ಥಳೀಯ ಪೊಲೀಸ್‌ ಠಾಣೆಯಲ್ಲಿ ದೂರು ನೀಡಲಾಗಿದೆ ಎಂದು ಆಕೆ ವಿವರಿಸಿದ್ದಾರೆ.

ವಿಷಯ ತಿಳಿದು ಆಸ್ಪತ್ರೆಗೆ ಭೇಟಿ ನೀಡಿದೆವು. ಆಕೆ ಅರೆಪ್ರಜ್ಞಾವಸ್ಥೆಯಲ್ಲಿದ್ದಳು. ಹೀಗಾಗಿ ಹೇಳಿಕೆ ಪಡೆಯಲು ಆಗಲಿಲ್ಲ.  ಗುಣಮುಖವಾದ ಬಳಿಕ ಪೊಲೀಸ್ ಠಾಣೆಗೆ ಬಂದು ದೂರು ನೀಡುವಂತೆ ಆಕೆಯ ಸಹಪಾಠಿಗಳಿಗೆ ಹೇಳಿದ್ದೆವು. ಆದರೆ ಮೂರು ದಿನದ ಬಳಿಕ ಆಸ್ಪತ್ರೆಯಿಂದ ಬಿಡುಗಡೆಯಾದ ವಿದ್ಯಾರ್ಥಿನಿ ಕೇರಳಕ್ಕೆ ತೆರಳಿದ್ದಾಳೆ. ಇದುವರೆಗೆ ನಮ್ಮಲ್ಲಿ ಯಾವುದೇ ದೂರು ದಾಖಲಾಗಿಲ್ಲ ಎಂದು ರೋಜಾ ಪೊಲೀಸ್  ಠಾಣೆಯ ಮೂಲಗಳು ತಿಳಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com