
ನವದೆಹಲಿ: ಇತ್ತೀಚಿನ ದಿನಗಳಲ್ಲಿ ಬಿಜೆಪಿ ಸಂಸದ ಸುಬ್ರಹ್ಮಣಿಯನ್ ಸ್ವಾಮಿ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಹಾಗೂ ಸರ್ಕಾರದ ಉನ್ನತ ಮಟ್ಟದ ಅಧಿಕಾರಿಗಳ ವಿರುದ್ಧ ಮಾತನಾಡುತ್ತಿರುವುದು ಪಕ್ಷಕ್ಕೆ ಮುಜುಗರ ಉಂಟಾಗಿದ್ದು, ಬಿಜೆಪಿಯ ವರಿಷ್ಠರು ಸ್ವಾಮಿ ನಡೆಯ ಬಗ್ಗೆ ಅಸಮಾಧಾನಗೊಂಡಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.
ಸುಬ್ರಹ್ಮಣಿಯನ್ ಸ್ವಾಮಿ ನಡೆಸುತ್ತಿರುವ ವಾಗ್ದಾಳಿಯ ಬಗ್ಗೆ ಬಿಜೆಪಿ ವರಿಷ್ಠರು ಅಸಮಾಧಾನಗೊಂಡಿದ್ದಾರಾದರೂ, ಸ್ವಾಮಿ ಅವರ ವಿರುದ್ಧ ಕ್ರಮ ಕೈಗೊಳ್ಳುವ ಬಗ್ಗೆ ಆತುರದ ನಿರ್ಧಾರ ತೆಗೆದುಕೊಳ್ಳದೆ ಇರಲು ನಿರ್ಧರಿಸಿದ್ದಾರಂತೆ. ಸುಬ್ರಹ್ಮಣಿಯನ್ ಸ್ವಾಮಿ ಅವರ ಮುಂದಿನ ನಡೆಗಳನ್ನು ಗಮನಿಸಿ ಅವರ ವಿರುದ್ಧ ಕ್ರಮ ಕೈಗೊಳ್ಳುವುದೋ ಬೇಡವೋ ಎಂಬ ಬಗ್ಗೆ ತೀರ್ಮಾನಿಸಲು ಬಿಜೆಪಿ ನಾಯಕರು ನಿರ್ಧರಿಸಿದ್ದಾರೆ.
ಸರ್ಕಾರದಲ್ಲಿರುವ ಪ್ರಮುಖ ಸಚಿವರ ವಿರುದ್ಧ ವಾಗ್ದಾಳಿ ನಡೆಸುತ್ತಿರುವ ಸುಬ್ರಹ್ಮಣಿಯನ್ ಸ್ವಾಮಿ ಅವರಿಗೆ ಆರ್ ಎಸ್ ಎಸ್ ನ ಬೆಂಬಲವಿದೆ ಎಂಬ ಊಹಾಪೋಹಗಳನ್ನು ಬಿಜೆಪಿಯ ಹಿರಿಯ ನಾಯಕರೊಬ್ಬರು ನಿರಾಕರಿಸಿದ್ದು, ಸಂಘಪರಿವಾರ ಸರ್ಕಾರದ ವರ್ಚಸ್ಸಿಗೆ ಧಕ್ಕೆ ಉಂಟಾಗುವ ರೀತಿಯ ವಾಗ್ದಾಳಿಗಳನ್ನು ಬೆಂಬಲಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
Advertisement