
ಚೆನ್ನೈ: ಇಲ್ಲಿನ ನುಂಗಾಂಬಕ್ಕಂ ರೈಲ್ವೆ ನಿಲ್ದಾಣದಲ್ಲಿ ಇನ್ಫೋಸಿಸ್ ಉದ್ಯೋಗಿ ಸ್ವಾತಿ.ಎಸ್ ಎಂಬಾಕೆಯನ್ನು ಹಾಡುಹಗಲೇ ಬರ್ಬರವಾಗಿ ಹತ್ಯೆ ಮಾಡಿದ ಶಂಕಿತ ವ್ಯಕ್ತಿಯ ರೇಖಾಚಿತ್ರವನ್ನು ಪೊಲೀಸರು ಬಿಡುಗಡೆ ಮಾಡಿದ್ದಾರೆ. ಅದರಲ್ಲಿ ಯುವಕನೊಬ್ಬ ಬೆನ್ನ ಮೇಲೆ ಬ್ಯಾಗ್ ಏರಿಸಿಕೊಂಡು ವೇಗವಾಗಿ ನಡೆದುಕೊಂಡು ಹೋಗುತ್ತಿದ್ದಾನೆ.
ಚೆನ್ನೈನಿಂದ 60 ಕಿಲೋ ಮೀಟರ್ ದೂರದಲ್ಲಿ ಸ್ವಾತಿ ಕೆಲಸ ಮಾಡುತ್ತಿದ್ದ ಇನ್ಫೋಸಿಸ್ ಕಂಪೆನಿ ಇದೆ. ಸ್ವಾತಿ ನುಂಗಾಂಬಕ್ಕಂ ನಿಲ್ದಾಣದ ಹತ್ತಿರ ಕೊಲೊನಿಯೊಂದರಲ್ಲಿ ವಾಸಿಸುತ್ತಿದ್ದಳು. ಯುವಕ ಅನೇಕ ತಿಂಗಳುಗಳಿಂದ ಆಕೆಯನ್ನು ಹಿಂಬಾಲಿಸುತ್ತಿದ್ದು ಆಕೆಯ ಮೇಲೆ ಕಣ್ಣಿಟ್ಟಿದ್ದ ಎನ್ನಲಾಗುತ್ತಿದೆ.
ನಿನ್ನೆ ಮುಂಜಾನೆ 6.45ರ ಸುಮಾರಿಗೆ ಸ್ವಾತಿ ಆಫೀಸಿಗೆ ಹೋಗಲು ರೈಲ್ವೆ ನಿಲ್ದಾಣದಲ್ಲಿ ಕಾಯುತ್ತಿರುವಾಗ ಯುವಕ ಆಕೆಯ ಬಳಿಗೆ ಬಂದಿದ್ದಾನೆ. ಇಬ್ಬರ ನಡುವೆ ತೀವ್ರ ವಾಗ್ದಾಳಿ ನಡೆದಿದೆ. ಆಗ ತನ್ನ ಬೆನ್ನಹಿಂದೆ ಅಡಗಿಸಿಟ್ಟಿದ್ದ ಕುಡಗೋಲಿನಿಂದ ಸ್ವಾತಿ ಮುಖ, ಕುತ್ತಿಗೆ ಮೇಲೆ ಮನಬಂದಂತೆ ದಾಳಿ ನಡೆಸಿದ್ದಾನೆ. ಸ್ವಾತಿ ಕೂಡಲೇ ಕುಸಿದುಬಿದ್ದಳು.
ರೈಲ್ವೆ ನಿಲ್ದಾಣದಲ್ಲಿ ಹಲವು ಸಹ ಪ್ರಯಾಣಿಕರಿದ್ದರೂ ರಕ್ತದ ಮಡುವಿನಲ್ಲಿ ಬಿದ್ದಿದ್ದ ಸ್ವಾತಿಯ ನೆರವಿಗೆ ಯಾರೂ ಬರಲಿಲ್ಲ. ತಮ್ಮ ರೈಲು ಬಂದಾಗ ಹತ್ತಿಕೊಂಡು ಹೋಗಿದ್ದಾರೆ.
ಈ ಘಟನೆ ಹಾಡುಹಗಲೇ ಜನರ ಓಡಾಟದ ಮಧ್ಯೆ ನಡೆದದ್ದು ಮತ್ತೊಂದು ವಿಶೇಷ. ಇಷ್ಟೊಂದು ಜನದಟ್ಟಣಿಯ ನಿಲ್ದಾಣ ಇದಾದರೂ ಇಲ್ಲಿ ಭದ್ರತೆಯಿಲ್ಲ ಎನ್ನುತ್ತಾರೆ ಮಹಿಳಾ ಪ್ರಯಾಣಿಕರೊಬ್ಬರು.
ರೈಲ್ವೆ ನಿಲ್ದಾಣದಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಸದಿರುವುದರಿಂದ ಆರೋಪಿಯನ್ನು ಹಿಡಿಯುವುದು ಪೊಲೀಸರಿಗೆ ಸ್ವಲ್ಪ ಕಷ್ಟವಾಗುತ್ತಿದೆ. ಘಟನೆ ಬಗ್ಗೆ ಹೇಳಿಕೆ ಹೊರಡಿಸಿರುವ ಇನ್ಫೋಸಿಸ್, ನಮ್ಮ ಕಂಪೆನಿಯ ಉದ್ಯೋಗಿಯೊಬ್ಬರು ಈ ರೀತಿ ಕೊಲೆಯಾಗುರುವುದು ನಮಗೆ ಅತೀವ ದುಃಖವಾಗುತ್ತಿದೆ. ನಾವು ಸ್ಥಳೀಯ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸುತ್ತಿದ್ದು, ಮುಂದಿನ ತನಿಖೆಗೆ ನಮ್ಮ ಕಡೆಯಿಂದ ಸಹಕಾರ, ನೆರವು ನೀಡುತ್ತೇವೆ ಎಂದು ಹೇಳಿದೆ.
Advertisement