ವಿಮಾನ ವಿಳಂಬ: ಏರ್ ಇಂಡಿಯಾ ವಿರುದ್ಧ ವೆಂಕಯ್ಯ ನಾಯ್ಡು ಗರಂ

ಪೈಲೆಟ್ ಬಂದಿಲ್ಲ ಎಂಬ ಕಾರಣಕ್ಕಾಗಿ ವಿಮಾನ ಹೊರಡುವುದು ವಿಳಂಬವಾದ ಕಾರಣ ಕೇಂದ್ರ ನಗರಾಭಿವೃದ್ಧಿ ಸಚಿವ ಎಂ. ವೆಂಕಯ್ಯ ನಾಯ್ದು ಅವರು....
ವೆಂಕಯ್ಯ ನಾಯ್ಡು
ವೆಂಕಯ್ಯ ನಾಯ್ಡು
ನವದೆಹಲಿ: ಪೈಲೆಟ್ ಬಂದಿಲ್ಲ ಎಂಬ ಕಾರಣಕ್ಕಾಗಿ ವಿಮಾನ ಹೊರಡುವುದು ವಿಳಂಬವಾದ ಕಾರಣ ಕೇಂದ್ರ ನಗರಾಭಿವೃದ್ಧಿ ಸಚಿವ ಎಂ. ವೆಂಕಯ್ಯ ನಾಯ್ದು ಅವರು ಸರ್ಕಾರಿ ಸ್ವಾಮ್ಯದ ಏರ್ ಇಂಡಿಯಾವನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಅಲ್ಲದೆ ಈ ಬಗ್ಗೆ ವಿವರಣೆ ನೀಡುವಂತೆ ಸೂಚಿಸಿದ್ದಾರೆ.
ಟ್ವೀಟ್ ಮಾಡುವ ಮೂಲಕ ಏರ್ ಇಂಡಿಯಾ ವಿರುದ್ಧ ತಮ್ಮ ಅಸಮಧಾನವನ್ನು ಹೊರಹಾಕಿರುವ ಕೇಂದ್ರ ಸಚಿವ, ವಿಮಾನ ವಿಳಂಬವಾದ ಕುರಿತು ಏರ್ ಇಂಡಿಯಾ ಸ್ಪಷ್ಟನೆ ನೀಡಬೇಕು. ಇತರ ವಿಮಾನ ಯಾನ ಸಂಸ್ಥೆಗಳು ಒಡ್ಡುತ್ತಿರುವ ಸ್ಪರ್ಧೆಯ ಕುರಿತು ಏರ್ ಇಂಡಿಯಾಗೆ ಅರಿವಿರಬೇಕು. ವಿಮಾನ ವಿಳಂಬವಾದ ಕಾರಣ ನಾನು ಮುಖ್ಯವಾದ ಸಭೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಲಿಲ್ಲ ಎಂದಿದ್ದಾರೆ.
ವೆಂಕಯ್ಯ ನಾಯ್ಡು ಅವರು ಇಂದು ತುರ್ತಾಗಿ ಹೈದರಾಬಾದ್​ಗೆ ತೆರಳುತ್ತಿದ್ದರು. ಮಧ್ಯಾಹ್ನ 1.15ಕ್ಕೆ ಹೊರಡಬೇಕಿದ್ದ ಏರ್ ಇಂಡಿಯಾ ವಿಮಾನ ಪೈಲೆಟ್ ಬಂದಿಲ್ಲ ಎಂಬ ಕಾರಣಕ್ಕಾಗಿ 1.45 ಆದರೂ ಹೊರಡಲೇ ಇಲ್ಲ. ವಿಮಾನ ಹಾರಾಟ ವಿಳಂಬವಾಗಿದೆ ಎಂದು ಏರ್ ಇಂಡಿಯಾ ತಿಳಿಸಿತ್ತು. 12.30ಕ್ಕೆ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ನಾಯ್ಡು, ವಿಮಾನ ವಿಳಂಬದಿಂದ ಬೇಸತ್ತ ಮನೆಗೆ ವಾಪಸ್ಸಾಗಿದ್ದರು. ನಂತರ ಟ್ವಿಟರ್​ನಲ್ಲಿ ತಮಗಾದ ಅನುಭವವನ್ನು ಹಂಚಿಕೊಂಡಿದ್ದು, ಏರ್ ಇಂಡಿಯಾ ವಿರುದ್ಧ ಕಿಡಿ ಕಾರಿದ್ದಾರೆ.
ಇನ್ನು ಕೇಂದ್ರ ಸಚಿವರ ಟ್ವೀಟ್ ಗೆ ಟ್ಟಿಟರ್ ನಲ್ಲೇ ಪ್ರತಿಕ್ರಿಯಿಸಿರುವ ಏರ್ ಇಂಡಿಯಾ, ವೆಂಕಯ್ಯ ನಾಯ್ಡು ಅವರಿಗಾಗಿರುವ ತೊಂದರೆಗೆ ನಾವು ವಿಷಾದ ವ್ಯಕ್ತಪಡಿಸುತ್ತೇವೆ. ಪೈಲೆಟ್ ಟ್ರಾಫಿಕ್ ಜಾಮ್ ನಲ್ಲಿ ಸಿಲುಕಿದ್ದ ಕಾರಣ ಸಮಯಕ್ಕೆ ಸರಿಯಾಗಿ ಆಗಮಿಸಲು ಸಾಧ್ಯವಾಗಲಿಲ್ಲ, ಪ್ರಕರಣ ಕುರಿತು ತನಿಖೆಗೆ ಆದೇಶಿಸಲಾಗಿದೆ ಎಂದು ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com