ಉತ್ತರಾಖಂಡದಲ್ಲಿ ಭಾರಿ ಮಳೆ: ಮೇಘಸ್ಫೋಟಕ್ಕೆ 30 ಬಲಿ, ನೂರಾರು ಮಂದಿ ನಾಪತ್ತೆ

ದೇವನಾಡು ಉತ್ತರಾಖಂಡದಲ್ಲಿ ಮತ್ತೆ ಮೇಘಸ್ಫೋಟ ಸಂಭವಿಸಿದ್ದು, ಸತತವಾಗಿ ಸುರಿಯುತ್ತಿರುವ ಭಾರಿ ಮಳೆಗೆ ಈ ವರೆಗೂ 30 ಮಂದಿ...
ಭಾರಿ ಮಳೆಯಿಂದ ಕುಸಿದಿರುವ ರಿಷಿಕೇಶ - ಭದ್ರಿನಾಥ ರಾಷ್ಟ್ರೀಯ ಹೆದ್ದಾರಿ
ಭಾರಿ ಮಳೆಯಿಂದ ಕುಸಿದಿರುವ ರಿಷಿಕೇಶ - ಭದ್ರಿನಾಥ ರಾಷ್ಟ್ರೀಯ ಹೆದ್ದಾರಿ
ಪಿಥೋರ್ ಘಡ್: ದೇವನಾಡು ಉತ್ತರಾಖಂಡದಲ್ಲಿ ಮತ್ತೆ ಮೇಘಸ್ಫೋಟ ಸಂಭವಿಸಿದ್ದು, ಸತತವಾಗಿ ಸುರಿಯುತ್ತಿರುವ ಭಾರಿ ಮಳೆಗೆ ಈ ವರೆಗೂ 30 ಮಂದಿ ಸಾವನ್ನಪ್ಪಿದ್ದು, ನೂರಾರು ಮಂದಿ ನಾಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ.
ಉತ್ತರಾಖಂಡದ ಛಮೋಲಿ ಜಿಲ್ಲೆಯಲ್ಲಿ ಸಂಭವಿಸಿದ ಮೇಘಸ್ಫೋಟದಿಂದಾಗಿ ರಾಜ್ಯಾದ್ಯಂತ ಭಾರಿ ಮಳೆ ಸುರಿಯುತ್ತಿದ್ದು, ಪವಿತ್ರ ಗಂಗಾನದಿ ಉಕ್ಕಿ ಹರಿಯುತ್ತಿದೆ.
ಇನ್ನು ಪಿಥೋರ್ ಘಡದ  ಸುತ್ತಮುತ್ತಲಿನ ಸುಮಾರು 7ಕ್ಕೂ ಹೆಚ್ಚು ಹಳ್ಳಿಗಳು ಸಂಪೂರ್ಣ ಜಲಾವೃತ್ತವಾಗಿದ್ದು, ಸಿಂಘಾಲಿ ಪ್ರದೇಶದಲ್ಲಿ ಐದು ಶವಗಳು, ಸುವಾ ಗ್ರಾಮದಲ್ಲಿ ಒಂದು ಮತ್ತು ಥಾಲ್ ಗ್ರಾಮದಲ್ಲಿ ಮೂರು  ಶವಗಳು ದೊರೆತಿವೆ ಎಂದು ತಿಳಿದುಬಂದಿದೆ. ಇದಲ್ಲದೆ ಪಿಥೋರ್ ಘಡ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೂಕುಸಿತ ಸಂಭವಿಸಿದ ಪರಿಣಾಮ ರಸ್ತೆ ಸಂಚಾರ ಅಸ್ಥವ್ಯಸ್ಥವಾಗಿದ್ದು, ಪಿಥೋರ್ ಘಡ  ಮತ್ತು ಯಮುನೋತ್ರಿ ಸಂಪರ್ಕಿಸುವ ರಸ್ತೆ ಸಂಪೂರ್ಣ ಸ್ಥಗಿತವಾಗಿದೆ.
ಸುವಾ ಗ್ರಾಮವನ್ನು ಕಲ್ಪಿಸುವ ಮೂರು ಪ್ರಮುಖ ಮೇಲ್ಸೇತುವೆಗಳು ನೀರಿನ ರಭಸಕ್ಕೆ ಮತ್ತು ಭೂಕುಸಿತದಿಂದಾಗಿ ಕೊಚ್ಚಿ ಹೋಗಿದ್ದು, ಕೇದಾರನಾಥ ದೇವಾಲಯ ಸಂಪರ್ಕಿಸುವ ಗಂಗೋಲ್  ಗಾಂವ್ ಹೆದ್ದಾರಿ ಕೂಡ ಭೂಕುಸಿತದಿಂದ ಸ್ಥಗಿತಗೊಂಡಿದೆ.
ಅಲ್ಲದೆ ಭೂಕುಸಿತದಲ್ಲಿ ಹಲುವ ಮನೆಗಳು ಕುಸಿದಿದ್ದು, ಅಪಾಯದಲ್ಲಿ ಸಿಲುಕಿರುವ ನೂರಾರು ನಾಗರಿಕನ್ನು ಸುರಕ್ಷಿತ ಪ್ರದೇಶಗಳಿಗೆ ರವಾನಿಸುವ ಕಾರ್ಯ ಭರದಿಂದ ಸಾಗಿದೆ ಎಂದು ಪಿಥೋರ್  ಘಡ ಜಿಲ್ಲಾ ಮ್ಯಾಜಿಸ್ಟ್ರೇಟ್ ಹೆಚ್ ಸಿ ಸೆಮ್ವಾಲ್ ತಿಳಿಸಿದ್ದಾರೆ. ಇನ್ನು ಛಮೋಲಿಯಲ್ಲಿ ಸಂಭವಿಸಿದ ಮೇಘಸ್ಫೋಟದ ಪರಿಣಾಮ ಕಳೆದ 24 ಗಂಟೆಗಳಲ್ಲಿ ಬರೋಬ್ಬರಿ 54 ಮಿ.ಮೀ ಮಳೆಯಾಗಿದ್ದು,  ಮಳೆಯಿಂದಾಗಿ ಅಲ್ಕಾನಂದ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ರಾಜ್ಯದಲ್ಲಿರುವ ವಿವಿಧ ಅಣೆಕಟ್ಟುಗಳು ಎಲ್ಲ ಬಾಗಿಲುಗಳನ್ನು ಏಕಕಾಲಕ್ಕೆ ತೆರೆದು ಅಪಾರ ಪ್ರಮಾಣದ ನೀರನ್ನು ಹೊರ ಬಿಡಲಾಗುತ್ತಿದೆ. ಅಲ್ಲದೆ ಸಮೀಪದ ಗ್ರಾಮಗಳಿಗೆ ಪ್ರವಾಹದ ಮುನ್ನೆಚ್ಚರಿಕೆ ಕೂಡ ನೀಡಲಾಗಿದೆ ಎಂದು ಸ್ಥಳೀಯ ಜಿಲ್ಲಾಡಳಿತ ತಿಳಿಸಿದೆ.
ಕಳೆದ ತಿಂಗಳಷ್ಟೇ ಉತ್ತರಾಖಂಡದಲ್ಲಿ ಮೇಘಸ್ಫೋಟವಾಗಿ ಪವಿತ್ರ ಯಾತ್ರಾ ಸ್ಥಳಗಳ ಮಾರ್ಗ ಸ್ಥಗಿತವಾಗಿತ್ತು. ಇದೀಗ ಮತ್ತೆ ಛಮೋಲಿಯಲ್ಲಿ ಮೇಘ ಸ್ಫೋಟ ಸಂಭವಿಸಿದ್ದು, ಮತ್ತೆ ಯಾತ್ರೆಗೆ ಅಡ್ಡಿಯುಂಟಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X

Advertisement

X
Kannada Prabha
www.kannadaprabha.com