ಅಬಕಾರಿ ಸುಂಕ ಮರು ಜಾರಿ ವಿರೋಧಿಸಿ ಚಿನ್ನಾಭರಣ ವರ್ತಕರ ಮುಷ್ಕರ

ಚಿನ್ನಾಭರಣ ಕ್ಷೇತ್ರವನ್ನು ಅಬಕಾರಿ ಸುಂಕದ ವ್ಯಾಪ್ತಿಗೆ ಒಳಪಡಿಸಿರುವುದನ್ನು ಖಂಡಿಸಿ ಅಖಿಲ ಭಾರತ ಆಭರಣ ಮಾರಾಟಗಾರರ ಒಕ್ಕೂಟ ಮೂರು ದಿನಗಳ ಕಾಲ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮುಂಬಯಿ: ಚಿನ್ನಾಭರಣ ಕ್ಷೇತ್ರವನ್ನು ಅಬಕಾರಿ ಸುಂಕದ ವ್ಯಾಪ್ತಿಗೆ ಒಳಪಡಿಸಿರುವುದನ್ನು ಖಂಡಿಸಿ ಅಖಿಲ ಭಾರತ ಆಭರಣ ಮಾರಾಟಗಾರರ ಒಕ್ಕೂಟ ಮೂರು ದಿನಗಳ ಕಾಲ ಚಿನ್ನಾಭರಣ ಅಂಗಡಿಗಳ ಬಂದ್​ಗೆ ಕರೆ ನೀಡಿದೆ.

ಶೇ.1 ಅಬಕಾರಿ ಸುಂಕದ ಮರು ಜಾರಿ ಹಾಗೂ 2 ಲಕ್ಷ ರೂ.ಗಿಂತ ಹೆಚ್ಚಿನ ಮೌಲ್ಯದ ಆಭರಣ ವ್ಯವಹಾರಗಳಿಗೆ ಪ್ಯಾನ್ ಕಾರ್ಡ್ ಕಡ್ಡಾಯಗೊಳಿಸಿರುವುದನ್ನು ವಿರೋಧಿಸಿ ಮುಷ್ಕರ ನಡೆಸಲಾಗುವುದು ಎಂದು ಆಲ್ ಇಂಡಿಯಾ ಜೆಮ್ಸ್ ಆ್ಯಂಡ್ ಜ್ಯುವೆಲ್ಲರಿ ಟ್ರೇಡ್ ಫೆಡರೇಷನ್ (ಜಿಜೆಎಫ್) ಅಧ್ಯಕ್ಷ ಶ್ರೀಧರ್ ಜಿ.ವಿ ತಿಳಿಸಿದ್ದಾರೆ.

ಸುಮಾರು 300ಕ್ಕೂ ಹೆಚ್ಚು ಸಂಘಟನೆಗಳು ಭಾಗವಹಿಸಲಿದ್ದು, ಉತ್ಪಾದಕರು, ರಿಟೇಲ್ ವರ್ತಕರು, ಕುಶಲಕರ್ಮಿಗಳು ಮುಷ್ಕರ ಹೂಡಲಿದ್ದಾರೆ ಎಂದು ಹೇಳಿದ್ದಾರೆ. ಈ ನಡುವೆ ಕೇರಳ ಮತ್ತು ರಾಜ್ ಕೋಟ್‌ನಲ್ಲಿ (ಗುಜರಾತ್) ಎಲ್ಲ ಜ್ಯುವೆಲರ್ಸ್‌ ಅಸೋಸಿಯೇಶನ್‌ಗಳು ಮಂಗಳವಾರವೇ ಮುಷ್ಕರ ಆರಂಭಿಸಿವೆ.

ಬಜೆಟ್‌ನಲ್ಲಿ ಶೇ.1ರ ಅಬಕಾರಿ ಸುಂಕವನ್ನು ಮತ್ತೆ ಜಾರಿಗೊಳಿಸಲು ಪ್ರಸ್ತಾಪಿಸಿರುವುದು ಸಮಂಜಸವಲ್ಲ. 2ಲಕ್ಷ ರೂ.ಗಿಂತ ಹೆಚ್ಚಿನ ಮೊತ್ತದ ವ್ಯವಹಾರಗಳಿಗೆ ಪ್ಯಾನ್ ಕಡ್ಡಾಯ ಮಾಡಿರುವುದರಿಂದ ಈಗಾಗಲೇ ಆಭರಣ ವಲಯದ ವಹಿವಾಟು 25-30 ಪರ್ಸೆಂಟ್ ತಗ್ಗಿದೆ. 2ಲಕ್ಷ ರೂ.ಗಳ ಮಿತಿಯನ್ನು 10 ಲಕ್ಷ ರೂ.ಗೆ ವಿಸ್ತರಿಸುವುದರ ಬದಲಿಗೆ ಶೇ.1ರಷ್ಟು ಅಬಕಾರಿ ಸುಂಕವನ್ನು ಮರು ಜಾರಿಗೊಳಿಸುವ ಸರಕಾರದ ನಿರ್ಧಾರದಿಂದ ಮತ್ತಷ್ಟು ತೊಂದರೆಯಾಗಲಿದೆ ಎಂದು ಶ್ರೀಧರ್ ವಿವರಿಸಿದರು.

ಈ ಹಿಂದೆ 2005 ಹಾಗೂ 2012ರಲ್ಲಿ ಅಬಕಾರಿ ಸುಂಕ ವಿಧಿಸಲಾಗಿತ್ತಾದರೂ ಅಸಂಘಟಿತ ವಲಯವಾಗಿರುವ ಕ್ಷೇತ್ರದ ಮೇಲೆ ತೆರಿಗೆ ಹೇರಿಕೆಯಿಂದ ಉಂಟಾಗುತ್ತಿದ್ದ ತೊಂದರೆಗಳನ್ನು ಪರಿಗಣಿಸಿ ಯುಪಿಎ ಸರ್ಕಾರ ನಿರ್ಧಾರವನ್ನು ಹಿಂಪಡೆದಿತ್ತು. ಇದೀಗ ಮತ್ತೆ ತೆರಿಗೆ ವಿಧಿಸುವುದರಿಂದ ಚಿನ್ನಾಭರಣ ವ್ಯಾಪಾರ ಕುಂಠಿತವಾಗುತ್ತದೆ. ಸಣ್ಣ ಮತ್ತು ಮಧ್ಯಮ ವ್ಯಾಪಾರಸ್ಥರು ಬೀದಿಗೆ ಬರಬೇಕಾಗುತ್ತದೆ. ಲಕ್ಷಾಂತರ ನೌಕರರು ಉದ್ಯೋಗ ಕಳೆದುಕೊಳ್ಳಬೇಕಾಗುತ್ತದೆ. ಹಾಗಾಗಿ ತೆರಿಗೆ ಏರಿಕೆ ನಿರ್ಧಾರವನ್ನು ವಾಪಸ್ ಪಡೆಯುವಂತೆ ಕೇಂದ್ರ ಸರ್ಕಾರವನ್ನು ಆಗ್ರಹಿಸುವುದು ಬಂದ್​ನ ಉದ್ದೇಶ ಎಂದು ಒಕ್ಕೂಟದ ಅಧ್ಯಕ್ಷ ಜಿ.ವಿ.ಶ್ರೀಧರ್ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com