ನೋಯ್ಡಾ: ಕಳೆದ ಸೋಮವಾರ ದೆಹಲಿಯಲ್ಲಿ ನಿಗೂಢವಾಗಿ ನಾಪತ್ತೆಯಾಗಿ ಸುದ್ದಿಯಾಗಿದ್ದ ನೋಯ್ಡಾ ಮೂಲದ ಫ್ಯಾಶನ್ ಡಿಸೈನರ್ ಶಿಪ್ರಾ ಮಲಿಕ್ ಶುಕ್ರವಾರ ಮನೆಗೆ ವಾಪಸ್ ಆಗಿದ್ದು, ಕ್ರೈಂ ಪೆಟ್ರೋಲ್ ಪ್ರಭಾವದಿಂದ ತನ್ನ ಕಿಡ್ನಾಪ್ ಅನ್ನು ತಾನೇ ನಕಲಿ ಮಾಡಿದ್ದಾರೆ ಎನ್ನಲಾಗುತ್ತಿದೆ.
ಶಿಪ್ರಾ ಮಲಿಕ್ ಅಪಹರಣ ಪ್ರಕರಣ ಜನಪ್ರಿಯ ಟಿವಿ ಸೀರಿಯಲ್ ಕ್ರೈಮ್ ಪ್ಯಾಟ್ರೋಲ್ ನಿಂದ ಪ್ರಭಾವಿತರಾಗಿ ಈ ಕಟ್ಟುಕಥೆ ಹೆಣೆಯಲಾಗಿರಬಹುದು ಎಂದು ಪೊಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ.
ಪ್ರಕರಣದ ಪ್ರಾಥಮಿಕ ತನಿಖೆಯ ನಂತರ ಇದು ಅಪಹರಣವಲ್ಲ ಎಂದು ಪೊಲೀಸರು ತಿಳಿಸಿದ್ದು, ಕೌಟುಂಬಿಕ ಸಮಸ್ಯೆಯಿಂದಾಗಿ ತಾನು ಮನೆಯವರ ಜೊತೆ ಅಸಮಾಧಾನ ಹೊಂದಿದ್ದು, ಆ ಕಾರಣಕ್ಕಾಗಿ ಮನೆ ಬಿಟ್ಟು ಹೋಗಿರುವುದಾಗಿ ಶಿಪ್ರಾ ಪೊಲೀಸರಿಗೆ ತಿಳಿಸಿದ್ದಾರೆ.
ಹಾಗಾಗಿ ಇದು ಕಿಡ್ನಾಪ್ ಪ್ರಕರಣವಲ್ಲ, ಶಿಪ್ರಾ ತನ್ನ ಮನೆಯಿಂದ ತನ್ನ ಇಚ್ಚೆಯಿಂದಲೇ ಹೋಗಿರುವುದಾಗಿ ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಮನೆಯಿಂದ ಹೊರ ಹೋದ ತಾನು 3 ದಿನಗಳ ಕಾಲ ಹರ್ಯಾಣದ ಆಶ್ರಮ ಸೇರಿದಂತೆ ಕೆಲವು ಸ್ಥಳಗಳಿಗೆ ತೆರಳಿರುವುದಾಗಿ ಶಿಪ್ರಾ ಮಾಹಿತಿ ನೀಡಿದ್ದಾರೆಂದು ಪೊಲೀಸ್ ಮೂಲಗಳು ತಿಳಿಸಿವೆ.