ನವದೆಹಲಿ: ಪಶ್ಚಿಮ ಬಂಗಾಳ ವಿಧಾಸಭೆ ಚುನಾವಣೆ ದಿನಾಂಕ ಪ್ರಕಟವಾದ ಬೆನ್ನಲ್ಲೇ, ದೇಶದ್ರೋಹದ ಆರೋಪದ ಮೇಲೆ ಜೈಲಿಗೆ ಹೋಗಿಬಂದ ಜಹಾರಲಾಲ್ ನೆಹರೂ ವಿಶ್ವವಿದ್ಯಾಲದ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯ್ಯ ಕುಮಾರ್ ಅವರು ಈಗ ಪಶ್ಚಿಮ ಬಂಗಾಳದಲ್ಲಿ ಎಡಪಕ್ಷಗಳ ಪರ ಪ್ರಚಾರ ಮಾಡಲಿದ್ದಾರೆ.
ನಿನ್ನೆಯಷ್ಟೇ ಜೈಲಿನಿಂದ ಬಿಡುಗಡೆಯಾಗಿರುವ ಕನ್ಹಯ್ಯ ಕುಮಾರ್ ಅವರು ಮುಂಬರುವ ಪಶ್ಚಿಮ ಬಂಗಾಳ ವಿಧಾಸಭೆ ಚುನಾವಣೆಯಲ್ಲಿ ಎಡ ಪಕ್ಷಗಳ ಪರ ಪ್ರಚಾರ ಮಾಡಲಿದ್ದಾರೆ ಎಂದು ಸಿಪಿಐ(ಎಂ) ನಾಯಕ ಸಿತಾರಾಂ ಯೆಚುರಿ ಅವರು ಶುಕ್ರವಾರ ಹೇಳಿದ್ದಾರೆ.
ಕನ್ಹಯ್ಯ ಕುಮಾರ್ ಸೇರಿದಂತೆ ಎಡರಂಗ ಬೆಂಬಲಿಸುವ ಎಲ್ಲಾ ವಿದ್ಯಾರ್ಥಿಗಳು ಪ್ರಚಾರದಲ್ಲಿ ಭಾಗಿಯಾಗಲಿದ್ದು, ಇದೇ ಮೊದಲ ಬಾರಿಗೆ ದೇಶ ಎಡ ಪಕ್ಷಗಳ ಯುವಕರ ಶಕ್ತಿಯನ್ನು ನೋಡಲಿದೆ ಎಂದು ಯೆಚುರಿ ತಿಳಿಸಿದ್ದಾರೆ.
ಜನ ನಿರ್ಭಯದಿಂದ ಮತ ಚಲಾಯಿಸಲು ಕೇಂದ್ರ ಸರ್ಕಾರ ಪಾರದರ್ಶಕ ಚುನಾವಣೆ ನಡೆಸುವ ಭರವಸೆ ನೀಡಬೇಕು ಎಂದು ಸಿಪಿಐಎಂ ಬಯಸುತ್ತದೆ ಎಂದು ಅವರು ಹೇಳಿದರು.