ಮಿಲಿಟರಿಯಲ್ಲಿ ನೌಕರರ ಸಂಖ್ಯೆ ಕಡಿತ: ಮನೋಹರ್ ಪರ್ರಿಕರ್

ಮಿಲಿಟರಿಯಲ್ಲಿನ ನೌಕರರ ಸಂಖ್ಯೆಯನ್ನು ಕಡಿತಗೊಳಿಸಬೇಕು ಎಂದು ರಕ್ಷಣಾ ಸಚಿವ ಮನೋಹರ್...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಮಿಲಿಟರಿಯಲ್ಲಿನ ನೌಕರರ ಸಂಖ್ಯೆಯನ್ನು ಕಡಿತಗೊಳಿಸಬೇಕು ಎಂದು ರಕ್ಷಣಾ ಸಚಿವ ಮನೋಹರ್ ಪರ್ರಿಕರ್ ತಿಳಿಸಿದ್ದಾರೆ.

ಭಾರತ ದೇಶದ ಭೂ ಸೇನೆ, ವಾಯು ಸೇನೆ ಮತ್ತು ನೌಕಾ ಸೇನೆಯಲ್ಲಿ 1.3 ದಶಲಕ್ಷಕ್ಕಿಂತಲೂ ಹೆಚ್ಚು ನೌಕರರಿದ್ದು, ಭಾರತೀಯ ಮಿಲಿಟರಿ ವಿಶ್ವದಲ್ಲಿಯೇ ಮೂರನೇ ಅತಿ ದೊಡ್ಡದಾಗಿದೆ.

ಅಗತ್ಯಕ್ಕಿಂತ ಹೆಚ್ಚು ನೌಕರರನ್ನು ಭಾರತೀಯ ಸೇನೆಯಿಂದ ಕಡಿತಗೊಳಿಸಬೇಕು. ಇದನ್ನು ಭೂ ಸೇನೆಯಿಂದ ಪ್ರಾರಂಭಿಸಬಹುದು. ಪ್ರದೇಶವಾರು ಉದ್ಯೋಗಿಗಳನ್ನು ಕಡಿತಗೊಳಿಸುವಂತೆ ಹೇಳಿದ್ದು, ಇದಕ್ಕೆ ಸ್ವಲ್ಪ ಸಮಯ ಹಿಡಿಯುತ್ತದೆ ಎಂದು ಹೇಳಿದ್ದಾರೆ.

ಏರುತ್ತಿರುವ ಪಿಂಚಣಿ ಮತ್ತು ವೇತನ ಮಸೂದೆಯಿಂದಾಗಿ ಸೇನೆಯ ಮಾನವ ಸಂಪನ್ಮೂಲವನ್ನು ಕಡಿತಗೊಳಿಸಬೇಕಾಗಿದೆ. ಈ ವರ್ಷ ಭಾರತೀಯ ಮಿಲಿಟರಿಯ ಎಲ್ಲಾ ಉದ್ಯೋಗಿಗಳಿಗೆ 95 ಸಾವಿರ ಕೋಟಿ ರೂಪಾಯಿ ವೇತನ ನೀಡಲು ಬೇಕಾಗಿದೆ. ಇದು ಕಳೆದೆರಡು ವರ್ಷಗಳಲ್ಲಿ ಅಧಿಕವಾಗಿದೆ. ಈ ವರ್ಷದ ಪಿಂಚಣಿ ವೆಚ್ಚವೇ 82 ಸಾವಿರದ 333 ಕೋಟಿ ರೂಪಾಯಿಯಾಗಿದೆ ಎಂದರು.

ಇತ್ತೀಚಿನ ವರ್ಷಗಳಲ್ಲಿ ಪಿಂಚಣಿ ಮತ್ತು ಸಂಬಳ ನೀಡಲು ಅಧಿಕ ಹಣ ಭಾರತೀಯ ಮಿಲಿಟರಿಯಿಂದ ಹೋಗುತ್ತಿದ್ದು ಆಧುನಿಕ ಅಗತ್ಯ ಮಿಲಿಟರಿ ಉಪಕರಣಗಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಈ ವರ್ಷ ಹೊಸ ಮಿಲಿಟರಿ ಹಾರ್ಡ್ ವೇರ್ ಗಳನ್ನು ಖರೀದಿಸಲು ಸುಮಾರು 80 ಸಾವಿರ ಕೋಟಿ ರೂಪಾಯಿ ಹಣ ಬೇಕಾಯಿತು ಎಂದು ಪರ್ರಿಕರ್ ಹೇಳಿದರು.

ಎಲ್ಲಾ ಮಿಲಿಟರಿ ಸ್ಟೇಷನ್ ಗಳಲ್ಲಿ ದೂರವಾಣಿ ನಿರ್ವಾಹಕರಿದ್ದಾರೆ. ಇಂದು ಎಲ್ಲಾ ಕೆಲಸಗಳು ಸ್ವಯಂಚಾಲಿತವಾಗಿ ನಡೆಯುವಾಗ ದೂರವಾಣಿ ನಿರ್ವಾಹಕರ ಅಗತ್ಯವೇನಿದೆ? ಮಿಲಿಟರಿಯಲ್ಲಿ ಯಾವ ಇಲಾಖೆಯಲ್ಲಿ ಎಷ್ಟು ಉದ್ಯೋಗಿಗಳ ಪ್ರಮಾಣವನ್ನು ಕಡಿತಗೊಳಿಸಬೇಕು ಎಂಬ ಬಗ್ಗೆ ರಕ್ಷಣಾ ಇಲಾಖೆ ನಿರ್ಧರಿಸಲಿದೆ ಎಂದರು.

ಅತಿ ಹೆಚ್ಚು ನೌಕರರನ್ನೊಳಗೊಂಡ ಮಿಲಿಟರಿಯ ಬದಲಿಗೆ ತುಂಬಾ ಜಾಣ್ಮೆಯ, ಚುರುಕಿನ ಮಿಲಿಟರಿ ಪಡೆ ಉತ್ತಮ ಎಂದು ರಕ್ಷಣಾ ಸಚಿವ ಮನೋಹರ್ ಪರ್ರಿಕರ್ ಅಭಿಪ್ರಾಯಪಟ್ಟರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com