ನಾನೊಬ್ಬ ಕಠಿಣ ಸಂಧಾನಕಾರ; ರಫೆಲ್ ಜೆಟ್ ಸೂಕ್ತ ಬೆಲೆಗೆ ಸಿಗಬೇಕು: ಮನೋಹರ್ ಪರ್ರಿಕರ್

ತಾನು ಒಬ್ಬ ಕಠಿಣ ಸಂಧಾನಕಾರನಾಗಿದ್ದು, ಫ್ರಾನ್ಸ್ ನಿಂದ ಖರೀದಿಸುವ ರಫೆಲ್ ಯುದ್ಧ ವಿಮಾನವನ್ನು ಉತ್ತಮ ಸೂಕ್ತ ಬೆಲೆಗೆ...
ರಕ್ಷಣಾ ಸಚಿವ ಮನೋಹರ್ ಪರ್ರಿಕರ್(ಸಂಗ್ರಹ ಚಿತ್ರ)
ರಕ್ಷಣಾ ಸಚಿವ ಮನೋಹರ್ ಪರ್ರಿಕರ್(ಸಂಗ್ರಹ ಚಿತ್ರ)

ನವದೆಹಲಿ: ''ನಾನು ಒಬ್ಬ ಕಠಿಣ ಸಂಧಾನಕಾರನಾಗಿದ್ದು, ಫ್ರಾನ್ಸ್ ನಿಂದ ಖರೀದಿಸುವ ರಫೆಲ್ ಯುದ್ಧ ವಿಮಾನವನ್ನು ಉತ್ತಮ ಸೂಕ್ತ ಬೆಲೆಗೆ ಖರೀದಿಸಲು ಬಯಸುತ್ತೇನೆ'' ಎಂದು ರಕ್ಷಣಾ ಸಚಿವ ಮನೋಹರ್ ಪರ್ರಿಕರ್ ತಿಳಿಸಿದ್ದಾರೆ.

ಮುಂದಿನ ಹಣಕಾಸು ವರ್ಷಕ್ಕೆ ಮಂಡಿಸುವ ಬಜೆಟ್ ನಲ್ಲಿ ರಫೆಲ್ ಜೆಟ್ ವಿಮಾನ ಖರೀದಿಗೆ ಸಾಕಷ್ಟು ಹಣವನ್ನು ತೆಗೆದಿರಿಸಲಾಗುವುದು ಎಂದು ಹೇಳಿದರು.

''ನಾನೊಬ್ಬ ಕ್ಲಿಷ್ಟಕರ ಸಂಧಾನಕಾರ. ದೇಶಕ್ಕಾಗಿ ಹಣ ಉಳಿಸಲು ಬಯಸುತ್ತೇನೆ'' ಎಂದು ರಫೆಲ್ ಜೆಟ್ ವಿಮಾನ ಖರೀದಿಗೆ ಭಾರತ ಇನ್ನೂ ಏಕೆ ಸಹಿ ಹಾಕಿಲ್ಲ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.

ಭಾರತೀಯ ವಾಯುಪಡೆಗೆ ವಿಮಾನಗಳ ಅಗತ್ಯವಿದೆ. ಒಬ್ಬ ಉತ್ತಮ ಖರೀದಿದಾರ ತನ್ನ ದೌರ್ಬಲ್ಯವನ್ನು ಮಾರಾಟಗಾರರ ಮುಂದೆ ತೋರಿಸಿಕೊಳ್ಳುವುದಿಲ್ಲ.  ದೇಶದ ಹಿತಾಸಕ್ತಿಯಿಂದ ಈ ಬಗ್ಗೆ ಹೆಚ್ಚಿನದೇನೂ ಕೇಳಬೇಡಿ ಎಂದು ಹೇಳಿದರು.

ಹಲವು ಸಂದರ್ಭಗಳಲ್ಲಿ ಸೇತುವೆ ಸಿಕ್ಕಿದಾಗ ಅದನ್ನು ದಾಟಿಕೊಂಡು ಹೋಗುವುದು ಉತ್ತಮ ಎಂದು ರಫೆಲ್ ಜೆಟ್ ಒಪ್ಪಂದ ಏರ್ಪಡದಿದ್ದರೆ ಪರ್ಯಾಯ ಮಾರ್ಗವೇನು ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದರು. ಜೆಟ್ ವಿಮಾನ ಖರೀದಿಯಲ್ಲಿ ಅದರ ಬೆಲೆಯೇ ಒಪ್ಪಂದಕ್ಕೆ ಅಡ್ಡಿಯಾಗುತ್ತಿದೆ ಎಂದು ಕಳೆದ ತಿಂಗಳೂ ಸಹ ಪರ್ರಿಕರ್ ಹೇಳಿದ್ದರು.

ಭಾರತ ಮತ್ತು ಫ್ರಾನ್ಸ್ ನಡುವೆ ಜೆಟ್ ಯುದ್ಧ ವಿಮಾನ ಖರೀದಿಯ ಒಪ್ಪಂದ ಏರ್ಪಟ್ಟರೆ ಒಟ್ಟು ಮೊತ್ತದ ಶೇಕಡಾ 15ರಷ್ಟನ್ನು ತಕ್ಷಣವೇ ಭಾರತ ನೀಡಬೇಕಾಗುತ್ತದೆ.

ಕಳೆದ ಜನವರಿ ತಿಂಗಳಲ್ಲಿ ಫ್ರಾನ್ಸ್ ಅಧ್ಯಕ್ಷ ಫ್ರಾಂಕೋಯಿಸ್ ಹೊಲ್ಲಾಂಡ್ ಭಾರತಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ 36 ಜೆಟ್ ಯುದ್ಧ ವಿಮಾನಗಳನ್ನು ಖರೀದಿಸಲು ಒಪ್ಪಂದಕ್ಕೆ ಸಹಿ ಹಾಕಲಾಗಿತ್ತು. ಆದರೆ ಅದೀಗ ವಿಮಾನಗಳ ಬೆಲೆಗಳಲ್ಲಿ ಭಿನ್ನಾಭಿಪ್ರಾಯವುಂಟಾಗುತ್ತಿದೆ. ಯುದ್ಧ ವಿಮಾನಗಳ ಬೆಲೆ ಸುಮಾರು 50 ಸಾವಿರ ಕೋಟಿ ರೂಪಾಯಿ ಆಗಬಹುದು ಎಂದು ಅಂದಾಜಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com