ಖಾಕಿ ಚಡ್ಡಿ ಬದಲಿಗೆ ನೀಲಿ ಪ್ಯಾಂಟು: ಆರ್ ಎಸ್ ಎಸ್ ವಸ್ತ್ರ ಸಂಹಿತೆಯಲ್ಲಿ ಬದಲಾವಣೆ ಗಾಳಿ

ಮುಂದಿನ ವಾರ ರಾಜಸ್ತಾನದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಮೂರು ದಿನಗಳ ಅಖಿಲ ಭಾರತೀಯ ಪ್ರತಿನಿಧಿ ವಾರ್ಷಿಕ...
ಆರ್ ಎಸ್ ಎಸ್ ಸಂಚಾಲಕ ಮೋಹನ್ ಭಗವತ್, ಬಲಚಿತ್ರದಲ್ಲಿ ಖಾಕಿ ಧರಿಸಿರುವ ಪ್ರತಿನಿಧಿಗಳು(ಸಂಗ್ರಹ ಚಿತ್ರ)
ಆರ್ ಎಸ್ ಎಸ್ ಸಂಚಾಲಕ ಮೋಹನ್ ಭಗವತ್, ಬಲಚಿತ್ರದಲ್ಲಿ ಖಾಕಿ ಧರಿಸಿರುವ ಪ್ರತಿನಿಧಿಗಳು(ಸಂಗ್ರಹ ಚಿತ್ರ)

ನವದೆಹಲಿ: ಮುಂದಿನ ವಾರ ರಾಜಸ್ತಾನದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಮೂರು ದಿನಗಳ ಅಖಿಲ ಭಾರತೀಯ ಪ್ರತಿನಿಧಿ ವಾರ್ಷಿಕ ಸಭೆ ನಡೆಯಲಿದೆ. ಅಲ್ಲಿ ಬಿಜೆಪಿಯ ಸೈದ್ಧಾಂತಿಕ ಸಂಘಟನೆಯಾದ ಆರ್ ಎಸ್ ಎಸ್ ನ ಸದಸ್ಯರು ಚಡ್ಡಿ ಬದಲಿಗೆ ನೀಲಿ ಬಣ್ಣದ ಪ್ಯಾಂಟ್ ಧರಿಸಲಿದ್ದಾರೆ. ಖಾಕಿ ಬಣ್ಣದ ಬದಲಿಗೆ ನೀಲಿ ಅಥವಾ ಬೂದು ಬಣ್ಣದ ಬಟ್ಟೆಗೆ ಟ್ರೇಡ್ ಮಾರ್ಕ್ ನ್ನು ಬದಲಾಯಿಸಬೇಕು ಎಂಬ ಸಲಹೆಗಳೂ ಈಗಿನ ತಲೆಮಾರಿನ ಯುವಕರಿಂದ ಕೇಳಿಬರುತ್ತಿವೆ.

ನಾಗ್ಪುರದಲ್ಲಿ ಕಳೆದ ವರ್ಷ ನಡೆದ ವಾರ್ಷಿಕ ಸಭೆಯಲ್ಲಿ  ಈ ವಿಷಯ ಚರ್ಚಿಸಲಾಗಿತ್ತು. ಆರ್ ಎಸ್ ಎಸ್ ನ ಶಾಖೆಗಳಲ್ಲಿ ಐಟಿ ಉದ್ಯೋಗಿಗಳು ಟ್ರ್ಯಾಕ್ ಪ್ಯಾಂಟ್ ಧರಿಸಲು ಅವಕಾಶ ನೀಡಲಾಗಿತ್ತು.

ಈ ವರ್ಷದ ಸಭೆಯಲ್ಲಿ ಆರ್ ಎಸ್ ಎಸ್ ವಸ್ತ್ರ ನೀತಿ ಬದಲಾವಣೆ ಕುರಿತು ಮತ್ತು ಸಂಘದ ಮುಂದಿನ ಕಾರ್ಯಕ್ರಮದ ಕುರಿತು ಚರ್ಚೆ ನಡೆಸಲಾಗುವುದು ಎಂದು ಸಂಘದ ವಕ್ತಾರ ಮನಮೋಹನ್ ವೈದ್ಯ ತಿಳಿಸಿದ್ದಾರೆ. ವಾರ್ಷಿಕ ಕಾರ್ಯಕ್ರಮದಲ್ಲಿ ದೇಶಾದ ವಿವಿಧ ಭಾಗಗಳಿಂದ ಸುಮಾರು ಸಾವಿರಕ್ಕೂ ಹೆಚ್ಚು ಮಂದಿ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಗವತ್ ಉದ್ಘಾಟಿಸಲಿದ್ದಾರೆ.

ಜವಹರಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ ದೇಶ ವಿರೋಧಿ ಚಟುವಟಿಕೆಗಳು ನಡೆಯುತ್ತಿದೆ ಎಂಬ ಆರೋಪಕ್ಕೆ ಸಂಬಂಧಪಟ್ಟಂತೆ ಚರ್ಚೆಗಳು ನಡೆಯಲಿದ್ದು, ಆರ್ ಎಸ್ ಎಸ್ ಸಭೆಯಲ್ಲಿ ಎಂತಹ ಚರ್ಚೆಗಳು ನಡೆಯುತ್ತವೆ ಎಂಬ ಬಗ್ಗೆ ಎಲ್ಲರ ಕುತೂಹಲವಿದೆ. ಪ್ರಸ್ತುತ ದೇಶದ ರಾಜಕೀಯ ಬೆಳವಣಿಗೆ, ಸಾಮಾಜಿಕ-ರಾಜಕೀಯ ವಿಷಯಗಳು ಬಿಜೆಪಿ ಪಕ್ಷದ ಮೇಲೆ ಮತ್ತು ಸರ್ಕಾರದ ಮೇಲೆ ಯಾವ ರೀತಿಯಲ್ಲಿ ಪ್ರಭಾವ ಬೀರುತ್ತಿವೆ ಎಂಬ ಬಗ್ಗೆ ಕೂಡ ಚರ್ಚೆ ನಡೆಯಲಿದೆ. ಬಿಜೆಪಿ ಅಧ್ಯಕ್ಷ ಅಮಿತ್ ಶಾ ಭಾಗವಹಿಸಲಿದ್ದಾರೆ.
 
ಸಭೆಯಲ್ಲಿ ವಿಶ್ವ ಹಿಂದೂ ಪರಿಷತ್, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್, ಭಾರತೀಯ ಕಿಸಾನ್ ಸಂಘ, ಭಾರತೀಯ ಮಜದೂರ್ ಸಂಘ ಮತ್ತು ಸ್ವದೇಶಿ ಜಾಗರಣ ಮಂಚ್ ಭಾಗವಹಿಸಲಿವೆ. ನರೇಂದ್ರ ಮೋದಿಯವರು ಪ್ರಧಾನಿಯಾದ ನಂತರ ಆರ್ ಎಸ್ಎಸ್ ಶಾಖೆಗಳ ಸಂಖ್ಯೆ ಹೆಚ್ಚಾಗಿದ್ದು 51 ಸಾವಿರಕ್ಕೆ ತಲುಪಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com