
ಬೆಂಗಳೂರು/ ನವದೆಹಲಿ: ಕಿಂಗ್ ಫಿಶರ್ ಏರ್ ಲೈನ್ಸ್ ನ ಭಾರೀ ಮೊತ್ತದ ಸಾಲವನ್ನು ಕಟ್ಟದೆ ಬ್ಯಾಂಕುಗಳ ಕೆಂಗಣ್ಣಿಗೆ ಗುರಿಯಾಗಿರುವ ಮದ್ಯದ ದೊರೆ ವಿಜಯ್ ಮಲ್ಯ, ತಾವು ಸಾಲ ನೀಡಿದವರಿಗೆ ಹೆಚ್ಚುವರಿ ಪಾವತಿ ಮೂಲಕ ಆಕ ಕಂತಿನಲ್ಲಿ ಸಾಲ ತೀರಿಸಲು ಪ್ರಯತ್ನಿಸುತ್ತಿರುವುದಾಗಿ ಹೇಳಿದ್ದಾರೆ. ಸಾಲಗಾರ ಎಂಬ ಪದ ಬಳಕೆಯನ್ನು ವಿರೋಧಿಸಿದ ಅವರು, ಎಲ್ಲಾ ಸಾಲಗಳ ಮುಖವಾಣಿಯಾಗಿ ನನ್ನನ್ನು ಬಿಂಬಿಸಲಾಗುತ್ತಿದೆ ಮತ್ತು ನನ್ನ ವಿರುದ್ಧ ತಪ್ಪು ಮಾಹಿತಿ ರವಾನಿಸಲಾಗುತ್ತಿದೆ ಎಂದು ಹೇಳಿದ್ದಾರೆ.
ನಿನ್ನೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ತಾವೆಲ್ಲಿಗೂ ಪಲಾಯನ ಮಾಡಿಲ್ಲ. ಸಾಲ ಮರುಪಾವತಿ ಕುರಿತು ತನಿಖಾ ಸಂಸ್ಥೆಗಳು ತನಿಖೆ ನಡೆಸುವ ವೇಳೆ ಸಂಪೂರ್ಣವಾಗಿ ಸಹಕರಿಸುತ್ತೇನೆ ಎಂದು ಹೇಳಿದ್ದಾರೆ.
ಇದೇ ಸಂದರ್ಭದಲ್ಲಿ ಯುನೈಟೆಡ್ ಸ್ಪಿರಿಟ್ಸ್ ಕಂಪೆನಿಯ ಮುಖ್ಯಸ್ಥ ಹುದ್ದೆಯಿಂದ ನಿರ್ಗಮಿಸಿದ್ದಕ್ಕಾಗಿ ಬ್ರಿಟನ್ ನ ಡೈಜಿಯೋ ಕಂಪೆನಿಯಿಂದ ವಿಜಯ್ ಮಲ್ಯಗೆ ಸಿಗುತ್ತಿರುವ 515 ಕೋಟಿ ರೂಪಾಯಿ ಹಣದ ಮೊದಲ ಹಕ್ಕು ತಮ್ಮದಾಗಬೇಕು ಎಂದು ಭಾರತೀಯ ಸ್ಟೇಟ್ ಬ್ಯಾಂಕ್ ನೇತೃತ್ವದ ಬ್ಯಾಂಕುಗಳ ಒಕ್ಕೂಟ ಸಲ್ಲಿಸಿರುವ ಅರ್ಜಿಯ ತೀರ್ಪನ್ನು ಬೆಂಗಳೂರಿನ ಸಾಲ ವಸೂಲಾತಿ ನ್ಯಾಯಾಧಿಕರಣ ಇಂದು ಪ್ರಕಟಿಸಲಿದೆ.
ಇದಲ್ಲದೆ ಎಸ್ ಬಿಐ ವಿಜಯ್ ಮಲ್ಯ ವಿರುದ್ಧ ಅವರನ್ನು ಬಂಧಿಸಿ ಅವರ ಪಾಸ್ ಪೋರ್ಟನ್ನು ವಶಪಡಿಸಿಕೊಳ್ಳುವಂತೆ ಕೋರಿದೆ.
Advertisement