ಪಾಟ್ನಾ: ಬಿಹಾರದ ಸಚಿವರೊಬ್ಬರು ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಅಪರಾಧಿ ಮೊಹಮ್ಮದ್ ಸಹಾಬುದ್ದೀನ್ ನೊಂದಿಗೆ ಪಾರ್ಟಿ ಮಾಡುತ್ತಿರುವ ದೃಶ್ಯ ಕ್ಯಾಮೆರಾದಲ್ಲಿ ಸೇರೆಯಾಗಿದ್ದು, ಬಿಹಾರದ ನಿತೀಶ್ ಕುಮಾರ್ ಸರ್ಕಾರ ಈಗ ತೀವ್ರ ಸಂಕಷ್ಟಕ್ಕೆ ಸಿಲುಕಿದೆ.
ಕಳೆದ ಮಾರ್ಚ್ 6ರಂದು ಬಿಹಾರದ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಅಬ್ದುಲ್ ಘಫೂರ್ ಅವರು ಮತ್ತೊಬ್ಬ ಶಾಸಕರೊಂದಿಗೆ ಸಿವಾನ್ ಜೈಲಿಗೆ ಭೇಟಿ ನೀಡಿ, ಸಹಾಬುದ್ದೀನ್ ನನ್ನು ಭೇಟಿ ಮಾಡಿದ್ದಾರೆ.
ಮಾಜಿ ಸಂಸದರಾಗಿರುವ ಸಹಾಬುದ್ದೀನ್ ಅಪರಾಧ ಹಿನ್ನೆಲೆಯುಳ್ಳ ರಾಜಕಾರಣಿಯಾಗಿದ್ದಾರೆ.
ಇನ್ನೂ ಜೈಲಿನಲ್ಲಿ ಅಪರಾಧಿಯನ್ನು ಭೇಟಿ ಮಾಡಿದ ಕಮ್ಮ ಕ್ರಮವನ್ನು ಸಮರ್ಥಿಸಿಕೊಂಡಿರುವ ಸಚಿವ ಘಫೂರ್ ಅವರು, ಔಪಚಾರಿಕವಾಗಿ ತಮ್ಮ ಮಾಜಿ ಸಹೋದ್ಯೋಗಿ ಸಹಾಬುದ್ದೀನ್ ನನ್ನು ಭೇಟಿ ಮಾಡಿರುವುದಾಗಿ ಹೇಳಿದ್ದಾರೆ.
'ಅಂದು ನಾನು ಸಿವಾನ್ ಸರ್ಕ್ಯೂಟ್ ಹೌಸ್ ನಲ್ಲಿದ್ದೆ. ಜೈಲು ಸಹ ಅಲ್ಲೇ ಹತ್ತಿರದಲ್ಲೇ ಇತ್ತು. ಹೀಗಾಗಿ ಸಹಾಬುದ್ದೀನ್ ಭೇಟಿ ಮಾಡಲು ನಿರ್ಧರಿಸಿದೆ' ಎಂದು ಸಚಿವರು ಹೇಳಿದ್ದಾರೆ.