ಆರ್ಟ್ ಆಫ್ ಲಿವಿಂಗ್ ಕಾರ್ಯಕ್ರಮ: ರಾಜ್ಯಸಭೆಯಲ್ಲಿ ಗದ್ದಲ, ಕೋಲಾಹಲ

ಯಮುನಾ ನದಿ ತೀರದಲ್ಲಿ ಶ್ರೀ ಶ್ರೀ ರವಿಶಂಕರ ಗುರೂಜಿಯವರ ನೇತೃತ್ವದಲ್ಲಿ ನಾಡಿದ್ದು ಶುಕ್ರವಾರದಿಂದ ನಡೆಯಲಿರುವ ಆರ್ಟ್ ಆಫ್ ಲಿವಿಂಗ್ ನ...
ಯಮುನಾ ನದಿ ತೀರದಲ್ಲಿ ನಿರ್ಮಿಸಲಾಗಿರುವ ತಾತ್ಕಾಲಿಕ ಶೆಡ್ ಗಳು
ಯಮುನಾ ನದಿ ತೀರದಲ್ಲಿ ನಿರ್ಮಿಸಲಾಗಿರುವ ತಾತ್ಕಾಲಿಕ ಶೆಡ್ ಗಳು

ನವದೆಹಲಿ: ಯಮುನಾ ನದಿ ತೀರದಲ್ಲಿ ಶ್ರೀ ಶ್ರೀ ರವಿಶಂಕರ ಗುರೂಜಿಯವರ ನೇತೃತ್ವದಲ್ಲಿ ನಾಡಿದ್ದು ಶುಕ್ರವಾರದಿಂದ ನಡೆಯಲಿರುವ ಆರ್ಟ್ ಆಫ್ ಲಿವಿಂಗ್ ನ ಮೂರು ದಿನಗಳ ವಿಶ್ವ ಸಾಂಸ್ಕೃತಿಕ ಹಬ್ಬದ ಕುರಿತಂತೆ ಇಂದು ಸದನದಲ್ಲಿ ಕಲಾಪ ಆರಂಭವಾಗುತ್ತಿದ್ದಂತೆ ತೀವ್ರ ಗದ್ದಲ, ಕೋಲಾಹಲವುಂಟಾಯಿತು.

ಆರ್ಟ್ ಆಫ್ ಲಿವಿಂಗ್ ನ ಖಾಸಗಿ ಕಾರ್ಯಕ್ರಮಕ್ಕೆ ಭದ್ರತೆಗೆಂದು ಸೇನಾಪಡೆ ನಿಯೋಜಿಸಿರುವುದನ್ನು ಪ್ರತಿಪಕ್ಷಗಳು ವಿರೋಧಿಸಿವೆ. ಇಂದು ರಾಜ್ಯಸಭೆಯಲ್ಲಿ ಶೂನ್ಯ ವೇಳೆಯಲ್ಲಿ ಜೆಡಿಯುನ ಶರದ್ ಯಾದವ್ ವಿಷಯ ಪ್ರಸ್ತಾಪಿಸಿದರು.

 ಇದಕ್ಕೆ ಉತ್ತರಿಸಿದ ಸಂಸದೀಯ ವ್ಯವಹಾರಗಳ ರಾಜ್ಯ ಸಚಿವ ಮುಕ್ತಾರ್ ಅಬ್ಬಾಸ್ ನಖ್ವಿ, ಭದ್ರತೆಯ ಕಾರಣಕ್ಕಾಗಿ ಸೇನಾಪಡೆಯನ್ನು ನಿಯೋಜಿಸಲಾಗಿದೆ ಎಂದರು.
ಕಾಂಗ್ರೆಸ್ ನ ಹಿರಿಯ ನಾಯಕ ಗುಲಾಂ ನಬಿ ಆಜಾದ್ ಮಾತನಾಡಿ, ದೆಹಲಿ ಪೊಲೀಸರು ಕೂಡ ಭದ್ರತೆ ಬಗ್ಗೆ ಕಳವಳ ವ್ಯಕ್ತಪಡಿಸಿರುವುದರಿಂದ ತಮಗೆ ಕಾರ್ಯಕ್ರಮದ ಬಗ್ಗೆ ತೀವ್ರ ಆತಂಕವಿದೆ ಎಂದರು.

ಅದಕ್ಕೆ ಉತ್ತರಿಸಿದ ಹಣಕಾಸು ಸಚಿವ ಅರುಣ್ ಜೇಟ್ಲಿ, ಹಸಿರು ನ್ಯಾಯಾಧೀಕರಣ ವಿಚಾರಣೆ ನಡೆಸುತ್ತಿರುವಾಗ ನಾವಿಲ್ಲಿ ಆ ವಿಷಯದ ಕುರಿತು ಚರ್ಚೆ ನಡೆಸುವುದು ಸೂಕ್ತವಲ್ಲ. ಸಂವಿಧಾವ ವಿಧಿ 69ರಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ ಎಂದರು. ಇದಕ್ಕೆ ವಿರೋಧಪಕ್ಷದ ಸದಸ್ಯರು ತೃಪ್ತರಾಗಲಿಲ್ಲ.

ತಾತ್ಕಾಲಿಕ ಶೆಡ್ ನಿರ್ಮಾಣವನ್ನು ಕೂಡಲೇ ನಿಲ್ಲಿಸಬೇಕು ಎಂದು ಸಲ್ಲಿಸಲಾಗಿರುವ ಮನವಿ ಕುರಿತಂತೆ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ಇಂದು ಮಧ್ಯಾಹ್ನ ತೀರ್ಪು ನೀಡುವ ಸಾಧ್ಯತೆಯಿದೆ.

ನ್ಯಾಯಾಧಿಕರಣದ ಅಧ್ಯಕ್ಷ ಸ್ವಂತತೆರ್ ಕುಮಾರ್ ಅವರಿದ್ದ ಪೀಠ, ಅರಣ್ಯ ಮತ್ತು ಪರಿಸರ ಸಚಿವಾಲಯದಲ್ಲಿ ಅಫಿದವಿಟ್ಟು ಸಲ್ಲಿಸುವಂತೆ ಮತ್ತು ತಾತ್ಕಾಲಿಕ ಶೆಡ್ ನಿರ್ಮಾಣಕ್ಕೆ ಯಾಕೆ ಸಚಿವಾಲಯದ ಅನುಮತಿ ಬೇಕಾಗಿಲ್ಲ ಎಂಬುದನ್ನು ವಿವರಿಸುವಂತೆ ಸೂಚಿಸಿದೆ.


ಪರಿಸರ ಸಚಿವಾಲಯದ ತಜ್ಞರ ತಂಡ ಸ್ಥಳಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಅಲ್ಲಿ ಯಾವುದೇ ಕೊಳಕು, ತ್ಯಾಜ್ಯ ವಸ್ತುಗಳನ್ನು ಕಂಡಿಲ್ಲ. ಸ್ಥಳ ಸ್ವಚ್ಛವಾಗಿತ್ತು  ಎಂದು ವರದಿ ನೀಡಿದೆ. ಪರಿಸರ ಪರಿಣಾಮ ವಿಶ್ಲೇಷಣೆ ಅಧಿಸೂಚನೆ 2006ರ ಪ್ರಕಾರ, ತಾತ್ಕಾಲಿಕ ಕಟ್ಟಡ ನಿರ್ಮಾಣಕ್ಕೆ ಪರಿಸರ ಸಚಿವಾಲಯದ ಅನುಮತಿ ಬೇಕಾಗಿಲ್ಲ ಎಂದಿದೆ. ಕಾರ್ಯಕ್ರಮ ನಡೆಸಲು ಅನುಮತಿ ನೀಡಬೇಕೆ, ಬೇಡವೇ ಎಂಬ ಬಗ್ಗೆ ಇಂದು ನ್ಯಾಯಾಧೀಕರಣ ತೀರ್ಪು ನೀಡುವ ಸಾಧ್ಯತೆಯಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com