

ನವದೆಹಲಿ: ಜೆ ಎನ್ ಯು ವಿದ್ಯಾರ್ಥಿ ಸಂಘಟನೆ ಮುಖಂಡ ಕನ್ಹಯ್ಯ ಕುಮಾರ್ ಮೇಲೆ ಹೊರಗಿನ ವ್ಯಕ್ತಿಯಿಂದ(ವಿವಿಗೆ ಸಂಭವಿಲ್ಲದ) ಹಲ್ಲೆ ನಡೆದಿದೆ.
ಘಟನಾ ಸ್ಥಳದಲ್ಲಿದ್ದ ವಿದ್ಯಾರ್ಥಿಗಳು ಹಾಗೂ ಪ್ರಾಧ್ಯಾಪಕರ ಪ್ರಕಾರ, ವಿವಿಯ ಆಡಳಿತ ವಿಭಾಗದಲ್ಲಿ ನಡೆಯುತ್ತಿದ್ದ ರಾಷ್ಟ್ರೀಯವಾದದ ಕುರಿತಾದ ಉಪನ್ಯಾಸ ನಡೆಯುತ್ತಿರಬೇಕಾದರೆ ವ್ಯಕ್ತಿಯೊಬ್ಬ ಕನ್ಹಯ್ಯ ಕುಮಾರ್ ನನ್ನು ತನ್ನೊಂದಿಗೆ ಮಾತನಾಡುವಂತೆ ಹೇಳಿದ್ದಾನೆ. ಮಾತನಾಡಲು ಉಪನ್ಯಾಸ ನಡೆಯುತ್ತಿದ್ದ ಪ್ರದೇಶದ ಮೂಲೆಗೆ ಹೋದ ಕನ್ಹಯ್ಯ ಕುಮಾರ್ ನ್ನು ನಿಂದಿಸಿದ ವ್ಯಕ್ತಿ ಆತನಿಗೆ ಕಪಾಳ ಮೋಕ್ಷ ಮಾಡಿದ್ದಾನೆ.
ಈ ಘಟನೆ ನಡೆಯುತ್ತಿದ್ದಂತೆಯೇ ವಿದ್ಯಾರ್ಥಿಗಳು ಹಾಗೂ ಪ್ರಾಧ್ಯಾಪಕರು ಸ್ಥಳಕ್ಕೆ ಆಗಮಿಸಿ ವಿವಿಯ ಸೆಕ್ಯುರಿಟಿಯ ನೆರವಿನಿಂದ ಹಲ್ಲೆಗೊಳಗಾಗಿದ್ದ ಕನ್ಹಯ್ಯ ಕುಮಾರ್ ನನ್ನು ರಕ್ಷಿಸಿದ್ದಾರೆ.
ಕನ್ಹಯ್ಯ ಕುಮಾರ್ ಮೇಲೆ ಹಲ್ಲೆ ನಡೆಸಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ನಡೆಸುತಿದ್ದಾರೆ. ಹಲ್ಲೆ ನಡೆಸಿರುವ ವ್ಯಕ್ತಿಯ ವಿವರ ಇನ್ನಷ್ಟೇ ತಿಳಿಯಬೇಕಿದೆ.