ನವದೆಹಲಿ: ಇಶ್ರತ್ ಜಾಹನ್ ಎನ್ ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಅವರಿಗೆ ಕಳಂಕ ತರಲು ಯುಪಿಎ ಸರ್ಕಾರ ಭಾರೀ ಪಿತೂರಿ ನಡೆಸಿತ್ತು ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಗುರುವಾರ ಹೇಳಿದ್ದಾರೆ.
ನೇರವಾಗಿ ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ ಅವರ ಹೆಸರು ಪ್ರಸ್ತಾಪಿಸದೆ, ಅಂದಿನ ಗೃಹ ಸಚಿವರ ವಿರುದ್ಧ ವಾಗ್ದಾಳಿ ನಡೆಸಿದ ರಾಜನಾಥ್ ಸಿಂಗ್, ಕೇಸರಿ ಭಯೋತ್ಪಾದನೆ ಎಂದು ಹೇಳುವ ಮೂಲಕ ಭಯೋತ್ಪಾದನೆಗೆ ಬಣ್ಣ ಹಚ್ಚಿದರು ಎಂದರು.
ಅಫಿಡವಿಟ್ ತಿದ್ದಿದ ಆರೋಪಕ್ಕೆ ಸಂಬಂಧಿಸಿದಂತೆ ಇಂದು ಲೋಕಸಭೆಯಲ್ಲಿ ಪ್ರತಿಕ್ರಿಯಿಸಿದ ರಾಜನಾಥ್ ಸಿಂಗ್, ಇಶ್ರತ್ ಜಾಹನ್ ಪ್ರಕರಣದಲ್ಲಿ ಅಂದಿನ ಯುಪಿಎ ಸರ್ಕಾರ ರಾಜಕೀಯ ಮಾಡಿರುವುದು ದುರದೃಷ್ಟಕರ ಎಂದರು.
ಬಣ್ಣ, ಮತ ಹಾಗೂ ಧರ್ಮಗಳನ್ನು ಭಯೋತ್ಪಾದನೆಯೊಂದಿಗೆ ಸೇರಿಸಬಾರದು. ಭಯೋತ್ಪಾದನೆಗೆ ಯಾವುದೇ ಬಣ್ಣ ಇಲ್ಲ. ಆದರೆ ಜಾತ್ಯತೀತ ವಾದಿಗಳು ಭಯೋತ್ಪಾದನೆಗೆ ಬಣ್ಣ ಹಚ್ಚಿದರು. ನಿರ್ದಿಷ್ಟ ಜಾತ್ಯತೀತೆಯನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದರು.