ನವದೆಹಲಿ: ತೀವ್ರ ವಿರೋಧದ ನಡೆವೆಯೇ ಇಂದಿನಿಂದ ಮೂರು ದಿನಗಳ ಕಾಲ ನಡೆಯುವ, 'ಆರ್ಟ್ ಆಫ್ ಲಿವಿಂಗ್ ಫೌಂಡೇಶನ್' ಆಯೋಜಿಸಿರುವ ವಿಶ್ವ ಸಂಸ್ಕೃತಿ ಉತ್ಸವಕ್ಕೆ ಮಳೆ ಅಡ್ಡಿಯಾಗುವ ಸಾಧ್ಯತೆ ಇದೆ.
ಮುಂದಿನ ಮೂರು ದಿನಗಳಲ್ಲಿ ದೆಹಲಿ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಗುರುವಾರ ಮುನ್ಸೂಚನೆ ನೀಡಿದೆ.
ತಾಪಮಾನ ಕುಸಿತದಿಂದಾಗಿ ದೇಶದ ಉತ್ತರ ಭಾಗದಲ್ಲಿ ಆಲಿಕಲ್ಲು ಸಹಿತ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಹವಾಮಾನ ವೈಪರಿತ್ಯದಿಂದಾಗಿ ಬಿಹಾರ, ಜಾರ್ಖಂಡ್, ಹರಿಯಾಣ, ದೆಹಲಿ ಹಾಗೂ ಚಂಡೀಗಢದಲ್ಲಿ ಬಿರುಗಾಳಿ ಸಮೇತ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ.
ದೆಹಲಿಯ ಯಮುನಾ ನದಿ ದಂಡೆಯ ಮೇಲೆ ಆರ್ಟ್ ಆಫ್ ಲಿವಿಂಗ್ ನ ಶ್ರೀ ಶ್ರೀ ರವಿಶಂಕರ್ ಗುರೂಜಿ ಅವರು ಆಯೋಜಿಸಿರುವ ವಿಶ್ವ ಸಂಸ್ಕೃತಿ ಉತ್ಸವಕ್ಕೆ ಇಂದು ಸಂಜೆ ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಲಿದ್ದಾರೆ.