ಕಾನೂನಿಗೂ ಕಗ್ಗಂಟಾದ ಜರಾವಾ ಸಂಸ್ಕೃತಿಯ ಕಟ್ಟುಪಾಡು

ಅಂದಹಾಗೆ ಈ ಸಮುದಾಯದಲ್ಲಿ ಕಟ್ಟು ನಿಟ್ಟಿನ ನಿಯಮಗಳಿವೆ. ಅದೇನೆಂದರೆ, ಇಲ್ಲಿ ಮದುವೆಯಾಗದೇ ಇರುವ ಹೆಣ್ಣು ಅಥವಾ ವಿಧವೆ ಹೊರಗಿನ ವ್ಯಕ್ತಿಯ ದೈಹಿಕ ಸಂಪರ್ಕದಿಂದ ...
ಜರಾವಾ ಬುಡಕಟ್ಟು ಸಮುದಾಯ
ಜರಾವಾ ಬುಡಕಟ್ಟು ಸಮುದಾಯ
Updated on
ನವದೆಹಲಿ: ದಕ್ಷಿಣ ಅಂಡಮಾನ್ ದ್ವೀಪದಲ್ಲಿ ವಾಸಿಸುತ್ತಿರುವ ಜರಾವಾ ಬುಡಕಟ್ಟು ಸಮುದಾಯದ ಸಂಸ್ಕೃತಿಯೀಗ ಮತ್ತೆ ಚರ್ಚೆಗಾಸ್ಪದವಾಗಿದೆ. ಭಾರತದ ಶಿಲಾಯುಗದ ಕೊನೆಯ ಸಂತತಿ ಎಂದೇ ಜವಾರಾ ಬುಡಕಟ್ಟು ಸಮುದಾಯವನ್ನು ಹೇಳಲಾಗುತ್ತದೆ.
ನ್ಯೂಯಾರ್ಕ್  ಟೈಮ್ಸ್ ಪತ್ರಿಕೆಯ ಪ್ರಕಾರ ಈ ಸಮುದಾಯದಲ್ಲಿ ಸುಮಾರು 400 ಮಂದಿ ಇದ್ದಾರೆ. ಕಪ್ಪು ತ್ವಚೆ ಹಾಗೂ ಸ್ಥೂಲ ಕಾಯದವರಾಗಿದ್ದಾರೆ ಇವರು. ಇವರು ಸುಮಾರು 50,000 ವರ್ಷಗಳ ಹಿಂದೆ ದಕ್ಷಿಣ ಆಫ್ರಿಕಾದಿಂದ ವಲಸೆ ಬಂದವರು ಎಂದು ಹೇಳಲಾಗುತ್ತಿದೆ. 1998ರ ವರೆಗೆ ಇವರು ಇತರ ಜನರಿಂದ ಪ್ರತ್ಯೇಕವಾಗಿಯೇ ವಾಸಿಸುತ್ತಿದ್ದು, ಒಂದು ವೇಳೆ ಇವರ ಗಡಿಭಾಗವನ್ನು ದಾಟಿ ಹೊರಗಿನವರು ಯಾರಾದರೂ ಬಂದರೆ ಅವರ ವಿರುದ್ಧ ಬಾಣ ಹೂಡುತ್ತಿದ್ದರು.  
ಕ್ರಮೇಣ ಈ ಸಮುದಾಯ ಹೊರಗಿನ ಜನರ ಸಂಪರ್ಕಕ್ಕೆ ಬರತೊಡಗಿತು. ಇದರ ಪರಿಣಾಮ ಮದುವೆಯಾಗದೇ ಇರುವ ಹುಡುಗಿಯೊಬ್ಬಳು ಗರ್ಭಿಣಿಯಾದಳು. ಆಕೆಗೆ ಹುಟ್ಟಿದ ಮಗು ಬೆಳ್ಳಗಿತ್ತು. ಅಂದರೆ ಹೊರಗಿನ ವ್ಯಕ್ತಿಯೊಂದಿಗೆ ಆಕೆ ದೈಹಿಕ ಸಂಪರ್ಕ ನಡೆದಿತ್ತು ಎಂಬುದು ಸ್ಪಷ್ಟವಾಗಿತ್ತು.
ಅಂದಹಾಗೆ ಈ ಸಮುದಾಯದಲ್ಲಿ ಕಟ್ಟು ನಿಟ್ಟಿನ ನಿಯಮಗಳಿವೆ. ಅದೇನೆಂದರೆ, ಇಲ್ಲಿ ಮದುವೆಯಾಗದೇ ಇರುವ ಹೆಣ್ಣು ಅಥವಾ ವಿಧವೆ ಹೊರಗಿನ ವ್ಯಕ್ತಿಯ ದೈಹಿಕ ಸಂಪರ್ಕದಿಂದ ಗರ್ಭಿಣಿಯಾದರೆ ಅವಳಿಗೆ ಹುಟ್ಟಿದ ಮಗುವನ್ನು ಹತ್ಯೆ ಮಾಡಲಾಗುತ್ತದೆ. ಹೀಗೆ ಮಗುವನ್ನು ಕೊಲ್ಲುವುದು ಈ ಸಮುದಾಯದ ಸಂಸ್ಕೃತಿಯ ಭಾಗವೇ ಆಗಿದೆ. 
ಜರಾವಾ ಸಮುದಾಯದವರ ನಡುವೆ ಕೆಲಸ ಮಾಡಿದ ಸರ್ಕಾರಿ ವೈದ್ಯ ಡಾ. ರತನ್ ಚಂದ್ರ ಕಾರ್ ಅವರ ಅನುಭವ ಕಥನದಲ್ಲಿ ಜರಾವಾ ಸಂಸ್ಕೃತಿಯ ಸಂಪ್ರದಾಯಗಳು ಉಲ್ಲೇಖವಾಗಿದೆ. ಅದೇನೆಂದರೆ ಹೊರಗಿನ ವ್ಯಕ್ತಿಗಳಿಂದ ಮಗು ಹುಟ್ಟಿದರೆ ಆ ಮಗುವನ್ನು ಕೊಲ್ಲುವ ಮುನ್ನ ಆ ಮಗುವಿಗೆ ಜರಾವಾ ಸಮುದಾಯದಲ್ಲಿ ಮೊಲೆಯುಣಿಸುವ ಮಹಿಳೆಯರಿಂದ ಹಾಲೂಡಿಸಲಾಗುವುದು. ಎಲ್ಲರಿಂದ ಹಾಲುಣಿಸಿದ ನಂತರ ಆ ಮಗುವನ್ನು ಹತ್ಯೆ ಮಾಡಲಾಗುವುದು.
ಇಂಥಾ ಸಂಪ್ರದಾಯಗಳು ಅಲ್ಲಿ ನಡೆಯುತ್ತಲೇ ಇದ್ದರೂ ಇದ್ಯಾವುದರ ಬಗ್ಗೆ ವರದಿಯಾಗುತ್ತಿರಲಿಲ್ಲ. ಆದರೆ ಈ ಬಾರಿ ಇಂಥಾ ಘಟನೆಯೊಂದನ್ನು ನೋಡಿದ ಪ್ರತ್ಯಕ್ಷದರ್ಶಿಯೊಬ್ಬರು ಪೊಲೀಸರಿಗೆ ಈ ಮಾಹಿತಿಯನ್ನು ನೀಡಿದ್ದಾರೆ.
ಜರಾವಾ ಬುಡಕಟ್ಟು ಜನಾಂಗದ ರಕ್ಷಿತ ಪ್ರದೇಶದ ಬಳಿಯಲ್ಲಿರುವ ಆಸ್ಪತ್ರೆಯಲ್ಲಿ 5 ತಿಂಗಳ ಮಗುವೊಂದು ನಾಪತ್ತೆಯಾಗಿತ್ತು. ಆ ಮಗುವನ್ನು ಬುಡಕಟ್ಟು ಜನಾಂಗದ ವ್ಯಕ್ತಿಯೊಬ್ಬ ಹೊತ್ತುಕೊಂಡು ಹೋಗಿದ್ದನ್ನು ಮಗುವಿನ ಅಮ್ಮ ಮತ್ತು ಆಸ್ಪತ್ರೆಯ ಕೆಲಸದಾಳು ನೋಡಿದ್ದರು. ನಂತರ ಆ ಮಗುವಿನ ದೇಹ ಮಣ್ಣಿನಲ್ಲಿ ಹೂತಿಟ್ಟ ಸ್ಥಿತಿಯಲ್ಲಿ ಪತ್ತೆಯಾಗಿತ್ತು.
ಈ ಘಟನೆ ನಡೆದಿದ್ದು ಕಳೆದ ವರ್ಷ ನವೆಂಬರ್ ತಿಂಗಳಲ್ಲಿ. ಆದರೆ ಘಟನೆ ನಡೆದು 5 ತಿಂಗಳಾದರೂ ಈ ಪ್ರಕರಣದ ಬಗ್ಗೆ ಯಾವುದೇ ರೀತಿಯ ಕ್ರಮ ತೆಗೆದುಕೊಳ್ಳಲು ಸಾಧ್ಯವಾಗಿಲ್ಲ. ಯಾಕೆಂದರೆ ಬುಡಕಟ್ಟು ಜನಾಂಗದವರ ಸಂಪ್ರದಾಯ ಮತ್ತು ಪಾವಿತ್ರ್ಯತೆಯನ್ನು ಕಾಪಾಡಬೇಕೋ ಅಥವಾ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೋ ಎಂಬುದರ ಬಗ್ಗೆ ಪೊಲೀಸರು ಕೂಡಾ ಗೊಂದಲದಲ್ಲಿದ್ದಾರೆ. ಕಾನೂನಿಗಿಂತ ಮೇಲೆ ಯಾರೂ ಇಲ್ಲ ಎಂದು ಹೇಳುತ್ತಿದ್ದರೂ, ಇವರ ಕಟ್ಟುಪಾಡುಗಳನ್ನು ಪ್ರಶ್ನಿಸುವುದಕ್ಕೆ ಅಂಡಮಾನ್  ಪೊಲೀಸರು ಕೂಡಾ ಮೀನಾಮೇಷವೆಣಿಸುತ್ತಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com