ಪ್ರತಿಭಟನೆ ವೇಳೆ ಪೊಲೀಸ್ ಪಡೆಯ ಕುದುರೆಯ ಕಾಲು ಮುರಿದ ಬಿಜೆಪಿ ಶಾಸಕ!

ಡೆಹ್ರಾಡೂನ್‌ನಲ್ಲಿ ನಡೆದ ಪ್ರತಿಭಟನೆಯ ವೇಳೆ ಮುಸ್ಸೂರಿಯ ಬಿಜೆಪಿ ಶಾಸಕ ಗಣೇಶ್ ಜೋಷಿ ಪೊಲೀಸ್ ಪಡೆಯ ಕುದುರೆಗೆ ಹೊಡೆದು ಅದರ ಕಾಲು ಮುರಿದ ಘಟನೆ...
ಕುದುರೆಯ ಮೇಲೆ ಹಲ್ಲೆ ನಡೆಸುತ್ತಿರುವ ಶಾಸಕ (ಕೃಪೆ:  ಎಎನ್ ಐ)
ಕುದುರೆಯ ಮೇಲೆ ಹಲ್ಲೆ ನಡೆಸುತ್ತಿರುವ ಶಾಸಕ (ಕೃಪೆ: ಎಎನ್ ಐ)
ಡೆಹ್ರಾಡೂನ್: ಸೋಮವಾರ ಡೆಹ್ರಾಡೂನ್‌ನಲ್ಲಿ ನಡೆದ ಪ್ರತಿಭಟನೆಯ ವೇಳೆ ಮುಸ್ಸೂರಿಯ ಬಿಜೆಪಿ ಶಾಸಕ ಗಣೇಶ್ ಜೋಷಿ ಪೊಲೀಸ್ ಪಡೆಯ ಕುದುರೆಗೆ ಹೊಡೆದು ಅದರ ಕಾಲು ಮುರಿದ ಘಟನೆ ವರದಿಯಾಗಿದೆ. ಹರೀಶ್ ರಾವತ್ ನೇತೃತ್ವದ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ವಿಧಾನ ಸಭೆಯ ಮುಂದೆ ಪ್ರತಿಭಟನೆ ಕೈಗೊಂಡಿದ್ದು, ಈ ವೇಳೆ ಅಲ್ಲಿದ್ದ ಪೊಲೀಸ್ ಪಡೆಯ ಕುದುರೆಯ ಮೇಲೆ ಜೋಷಿ ಹಲ್ಲೆ ಮಾಡಿದ್ದಾರೆ.
(ಕಾಲು ಮುರಿದುಕೊಂಡಿರುವ ಕುದುರೆ)
ಹಲ್ಲೆಗೊಳಗಾದ ಕುದುರೆಯನ್ನು ಕೂಡಲೇ ಇಂಡಿಯನ್ ಮಿಲಿಟರಿ ಅಕಾಡೆಮಿಯ ಪಶು ಆಸ್ಪತ್ರೆಗೆ ದಾಖಲಿಸಿದ್ದು, ಕುದುರೆಯ ಕಾಲು ಮುರಿದು ಹೋಗಿದೆ ಎಂದು ಅಲ್ಲಿನ ವೈದ್ಯರು ಹೇಳಿದ್ದಾರೆ. 
ಆದಾಗ್ಯೂ, ಈ ಕೃತ್ಯವೆಸಗಿದ ಶಾಸಕ ಮತ್ತು ಆತನ ಅನುಯಾಯಿಗಳ ವಿರುದ್ಧ ನೆಹರು  ಕಾಲನಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಭಾರತ ದಂಡ ಸಂಹಿತೆಯ ಪ್ರಾಣಿ ಹಿಂಸೆ ತಡೆ ಕಾಯ್ದೆ ಪ್ರಕಾರ ಸೆಕ್ಷನ್ 429 ಮತ್ತು ಸೆಕ್ಷನ್ 188 ಅಡಿಯಲ್ಲಿ ಜೋಷಿ ವಿರುದ್ಧ ಕೇಸು ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಏತನ್ಮಧ್ಯೆ, ರಾಜ್ಯ ಸರ್ಕಾರವು ಬೇರೆಡೆ ಗಮನ ಸೆಳೆಯುವುದಕ್ಕಾಗಿಯೇ ತನ್ನ ಮೇಲಿನ ಆರೋಪವನ್ನು ದೊಡ್ಡದು ಮಾಡುತ್ತಿದೆ ಎಂದು ಶಾಸಕ ಗಣೇಶ್ ಜೋಷಿ ಹೇಳುತ್ತಿದ್ದಾರೆ.
ನಾವು ಶಾಂತಿಯುತವಾಗಿಯೇ ಪ್ರತಿಭಟನೆ ನಡೆಸುತ್ತಿದ್ದೆವು. ಆದರೆ ಸುಖಾಸುಮ್ಮನೆ ಅಲ್ಲಿ  ಪೊಲೀಸರನ್ನು ನಿಯೋಜಿಸಲಾಗಿತ್ತು. ಪ್ರತಿಭಟನೆಯ ವೇಳೆ ಆ ಕುದುರೆ ನಮ್ಮ ಕಾರ್ಯಕರ್ತ 28ರ ಹರೆಯದ ಮುನ್ನಿಗೆ ಒದೆದಿತ್ತು. ಆತನ ಎದೆಗೆ ಒದೆದ ಕಾರಣ, ಅದೇ ಕುದುರೆ ಇನ್ನುಳಿದ ವ್ಯಕ್ತಿಗಳ ಮೇಲೆ ದಾಳಿ ಮಾಡಬಾರದೆಂದು ನಾನು ಪೊಲೀಸರ ಕೈಯಲ್ಲಿದ್ದ ಲಾಠಿ ತೆಗೆದು ಕುದುರೆಯನ್ನು ನಿಯಂತ್ರಿಸಿದೆ. ಅನಂತರ ನಾವು ಧರಣಿ ಮಾಡಲು ಕುಳಿತಾಗ ಕುದುರೆಯೊಂದರ ಹಿಂಭಾಗದ ಕಾಲು ರಸ್ತೆಯಲ್ಲಿರುವ ಕಬ್ಬಿಣದ ಸರಳೊಂದಕ್ಕೆ ಸಿಕ್ಕಿ ಹಾಕಿಕೊಂಡಿದೆ ಎಂಬ ಸುದ್ದಿ ಸಿಕ್ಕಿತು. ಇದರಿಂದಾಗಿ ಕುದುರೆಯ ಕಾಲಿಗೆ ಗಾಯವಾಗಿದೆಯೇ ಹೊರತು ನಾನು ಹೊಡೆದಿರುವುದರಿಂದ ಅಲ್ಲ ಎಂದು ಜೋಷಿ ಹೇಳಿದ್ದಾರೆ.
ಜೋಷಿ ಅವರು ಕುದುರೆಗೆ ಹೊಡೆಯುತ್ತಿರುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಸಿಟಿ ಎಸ್ಪಿ ಅಜಯ್ ಸಿಂಗ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com