ನವದೆಹಲಿ: ಎಲ್ಲಕ್ಕಿಂತ ಭಾರತೀಯ ಜನತಾ ಪಕ್ಷ(ಬಿಜೆಪಿ)ವೇ ಅತ್ಯಂತ ರಾಷ್ಟ್ರ ವಿರೋಧಿ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ.
ಬುಧವಾರ ಬೆಳಿಗ್ಗೆ ಟ್ವಿಟರ್‌ನಲ್ಲಿ ಟ್ವೀಟ್ ಮಾಡಿದ ಕೇಜ್ರಿವಾಲ್, ಎಲ್ಲಕ್ಕಿಂತ ಬಿಜೆಪಿ ಅತ್ಯಂತ ರಾಷ್ಟ್ರವಿರೋಧಿ. ಅಷ್ಟೇ ಅಲ್ಲದೇ, ಜೆಎನ್ ಯು ಕ್ಯಾಂಪಸ್ ನಲ್ಲಿ ರಾಷ್ಟವಿರೋಧಿ ಘೋಷಣೆ ಕೂಗಿದವರನ್ನು ರಕ್ಷಿಸುತ್ತಿದೆ ಎಂದು ಅರವಿಂದ್ ಕೇಜ್ರಿವಾಲ್ ಆರೋಪಿಸಿದ್ದಾರೆ.
ದೇಶ ವಿರೋಧಿ ಘೋಷಣೆ ಕೂಗಿದವರು ಕಾಶ್ಮೀರದವರು. ಆದರೆ, ಅವರನ್ನು ಬಿಜೆಪಿ ರಕ್ಷಿಸುತ್ತಿದೆ. ಪಿಡಿಪಿ ಮುಖ್ಯಸ್ಥೆ ಮೆಹಬೂಬ ಮುಫ್ತಿ ಅವರನ್ನು ಬೇಸರ ಪಡಿಸಲು ಬಿಜೆಪಿಗೆ ಇಷ್ಟವಿಲ್ಲ. ಹಾಗಾಗಿ, ನಿಜವಾದ ಆರೋಪಿಗಳ ರಕ್ಷಣೆ ಮಾಡುತ್ತಿದೆ ಎಂದು ಅವರು ಕಿಡಿ ಕಾರಿದ್ದಾರೆ.
ಈ ಹಿಂದೆ ಕೇಜ್ರಿವಾಲ್ ಅವರು ''ನಾನು ಮೋದಿಯವರಿಗಿಂತ ದೊಡ್ಡ ದೇಶಭಕ್ತ. ದೇಶವನ್ನು ಒಡೆಯುತ್ತೇವೆ ಎಂದು ಘೋಷಣೆ ಕೂಗಿದವರನ್ನು ಯಾಕೆ ಇಲ್ಲಿಯವರೆಗೆ ಬಂಧಿಸಿಲ್ಲ ಎಂದು ನಾನು ಕೇಳುತ್ತೇನೆ. ಯಾಕೆಂದರೆ ಅವರು ಕಾಶ್ಮೀರದವರು. ಅವರನ್ನು ಬಂಧಿಸಿದರೆ ಮೆಹಬೂಬ ಮುಫ್ತಿ ಮುನಿಸಿಕೊಳ್ಳುತ್ತಾರೆ'' ಎಂದು ಟ್ವೀಟ್ ಮಾಡಿದ್ದರು.