ಟಿಎಂಸಿ ನಾಯಕರ ವಿರುದ್ಧ ಲಂಚ ಆರೋಪ: ಲೋಕಸಭೆಯಲ್ಲಿ ತೀವ್ರ ಕೋಲಾಹಲ

ಟಿಎಂಸಿಯ ಸಚಿವರು, ಸಂಸದರು, ಶಾಸಕರು ನಕಲಿ ಕಂಪೆನಿಯೊಂದರಿಂದ ಅದರ ಕೆಲಸ ಮಾಡಿಕೊಡಲು ಲಂಚ ಸ್ವೀಕಾರ...
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ

ನವದೆಹಲಿ: ಟಿಎಂಸಿಯ ಸಚಿವರು, ಸಂಸದರು, ಶಾಸಕರು ನಕಲಿ ಕಂಪೆನಿಯೊಂದರಿಂದ ಅದರ ಕೆಲಸ ಮಾಡಿಕೊಡಲು ಲಂಚ ಸ್ವೀಕಾರ ಮಾಡುತ್ತಿದ್ದ ವಿಡಿಯೋ ದೃಶ್ಯಾವಳಿ ಹಲವು ಸುದ್ದಿವಾಹಿನಿಗಳಲ್ಲಿ ಪ್ರಸಾರವಾಗುತ್ತಿದ್ದಂತೆ ನಿನ್ನೆ ಲೋಕಸಭೆ ಕಲಾಪದ ವೇಳೆ ತೀವ್ರ ಗದ್ದಲ, ಕೋಲಾಹಲ ನಡೆಯಿತು. ಕಾಂಗ್ರೆಸ್, ಸಿಪಿಎಂ ಮತ್ತು ಬಿಜೆಪಿ ಸದಸ್ಯರು ಸಂಸದೀಯ ತನಿಖೆ ನಡೆಸುವಂತೆ ಒತ್ತಾಯಿಸಿದವು.

ಖಾಸಗಿ ಸುದ್ದಿ ಪೋರ್ಟಲ್ ವೊಂದು ಸೋಮವಾರ ಕುಟುಕು ಕಾರ್ಯಾಚರಣೆಯ ವಿಡಿಯೋ ದೃಶ್ಯಾವಳಿಗಳನ್ನು ಬಿಡುಗಡೆ ಮಾಡಿದ್ದು, ಪಶ್ಚಿಮ ಬಂಗಾಳದಲ್ಲಿ ವಿಧಾನಸಭೆ ಚುನಾವಣೆಗೆ ಸಿದ್ಧವಾಗುತ್ತಿರುವ ಟಿಎಂಸಿಗೆ ಇದರಿಂದ ತೀವ್ರ ಮುಖಭಂಗವಾಗಿದೆ. ಅಲ್ಲಿನ ಪ್ರಮುಖ ವಿರೋಧ ಪಕ್ಷವಾದ ಸಿಪಿಎಂ ಮತ್ತು ಪ್ರವರ್ಧಮಾನಕ್ಕೆ ಬರುತ್ತಿರುವ ಬಿಜೆಪಿಗೆ ಪ್ರಮುಖ ಅಸ್ತ್ರವಾಗಿದೆ ಎಂದು ಹೇಳಬಹುದು.

ಸುದ್ದಿ ಜಾಲದ ಕುಟುಕು ಕಾರ್ಯಾಚರಣೆ ಸಿಪಿಎಂ, ಬಿಜೆಪಿ ಮತ್ತು ಕಾಂಗ್ರೆಸ್ ಸಂಸದರನ್ನು ಲೋಕಸಭೆಯಲ್ಲಿ ಒಂದು ಮಾಡಿದ್ದು, ಟಿಎಂಸಿ ನಾಯಕರ ವಿರುದ್ಧ ಭಷ್ಟಾಚಾರ ನಿಗ್ರಹ ಕಾಯ್ದೆಯಡಿ ಕೇಸು ದಾಖಲಿಸುವಂತೆ ಒತ್ತಾಯಿಸಿದರು. ಅಲ್ಲದೆ ಲಂಚ ಆರೋಪದ ವಿರುದ್ಧ ತನಿಖೆ ನಡೆಸಲು ವಿಶೇಷ ಸಂಸದೀಯ ತಂಡವನ್ನು ರಚಿಸುವಂತೆ ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಂಸದೀಯ ವ್ಯವಹಾರಗಳ ಸಚಿವ ಎಂ.ವೆಂಕಯ್ಯ ನಾಯ್ಡು, ಸಂಸತ್ತಿನ ಘನತೆಗೆ ಧಕ್ಕೆಯಾಗಿದೆ. ನಾವು ಸಂಸತ್ತಿನ ಸತ್ಯವನ್ನು ಕಾಪಾಡಬೇಕಿದೆ. ಇದೊಂದು ಪಿತೂರಿ ಎಂದು ಹೇಳಿ ಜನರನ್ನು ಸಮಾಧಾನಪಡಿಸಲು ಸಾಧ್ಯವಿಲ್ಲ ಎಂದು ಟಿಎಂಸಿ ನಾಯಕರ ಲಂಚ ಸ್ವೀಕಾರ ವಿಷಯಕ್ಕೆ ಸಂಬಂಧಪಟ್ಟಂತೆ ಹೇಳಿದರು.

ಸಿಪಿಎಂ ಸಂಸದ ಮೊಹಮ್ಮದ್ ಸಲೀಂ ಈ ವಿಷಯವನ್ನು ಸದನದ ಶೂನ್ಯ ವೇಳೆಯಲ್ಲಿ ಪ್ರಸ್ತಾಪಿಸಿದರು. ಆಗ ಬಿಜೆಪಿಯ ಎಸ್.ಎಸ್.ಅಹ್ಲುವಾಲಿಯಾ ಮತ್ತು ಕಾಂಗ್ರೆಸ್ ನ ಅದಿರ್ ರಂಜನ್ ಚೌಧರಿ ಅವರು ಕೂಡ ಟಿಎಂಸಿ ನಾಯಕರನ್ನು ದೂಷಿಸಿ ಪ್ರಕರಣದ ತನಿಖೆಗೆ ಆದೇಶಿಸಬೇಕು ಎಂದರು. ಆಗ ಟಿಎಂಸಿ ಮತ್ತು ಎಡಪಕ್ಷಗಳ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು.

ಇಂಥ ಜನರ ಜತೆ ಸಂಸತ್ತಿನಲ್ಲಿ ಕುಳಿತಿರುವುದಕ್ಕೆ ನಾಚಿಕೆಯಾಗುತ್ತಿದೆ. ಅವರು ನಾಚಿಕೆಪಟ್ಟುಕೊಳ್ಳಬೇಕು. ಅವರ ನಡವಳಿಕೆಯಿಂದಾಗಿ ಸಂಸತ್ತಿನ ಘನತೆಗೆ ಧಕ್ಕೆಯಾಗಿದೆ. ಆದುದರಿಂದ ತನಿಖೆಗೆ ಆದೇಶಿಸಬೇಕು ಎಂದು ಮೊಹಮ್ಮದ್ ಸಲೀಂ ಆಗ್ರಹಿಸಿದರು.

ಆರಂಭದಲ್ಲಿ ಮೌನವಾಗಿದ್ದ ಟಿಎಂಸಿ ಸಂಸದರು ಸೌಗತ್ ರಾಯ್ ಅವರು ಮಾತನಾಡಿದಾಗ ವಾಗ್ದಾಳಿ ನಡೆಸಲು ಆರಂಭಿಸಿದರು. ಸ್ಪೀಕರ್ ಸುಮಿತ್ರಾ ಮಹಾಜನ್ ಅವರು ಯಾವ ಕಾನೂನಿನ ಮೇರೆಗೆ ಈ ವಿಷಯವನ್ನು ಪ್ರಸ್ತಾಪಿಸಲು ಅವಕಾಶ ನೀಡಿದರು ಎಂದು ಕೇಳಿದರು. ಕುಟುಕು ಕಾರ್ಯಾಚರಣೆ ರಾಜಕೀಯ ಪಿತೂರಿಯಾಗಿದ್ದು, ಪಶ್ಚಿಮ ಬಂಗಾಳದಲ್ಲಿ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಸೋಲಿನ ಭೀತಿಯಿಂದ ವಿರೋಧ ಪಕ್ಷಗಳು ಮಾಡಿದ ಕುತಂತ್ರವಿದು ಎಂದು ಆರೋಪಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com