ರೋಹಟಕ್: ಹರಿಯಾಣ ಮಾಜಿ ಮುಖ್ಯಮಂತ್ರಿ ಭುಪಿಂದರ್ ಸಿಂಗ್ ಹೂಡಾ ಅವರ ಆಪ್ತ ಪ್ರೊ.ವಿರೇಂದ್ರ ಸಿಂಗ್ ಅವರು ಗುರುವಾರ ರೋಹಟಕ್ ಜಿಲ್ಲಾ ಕೋರ್ಟ್ ಗೆ ಶರಣಾಗಿದ್ದಾರೆ.
'ನಾನು ದೇಶದ ಕಾನೂನು ಪಾಲಿಸುವ ವ್ಯಕ್ತಿ. ನಾನು ಯಾವುದೇ ತಪ್ಪು ಮಾಡಿಲ್ಲ. ಶೀಘ್ರದಲ್ಲೇ ಸತ್ಯ ಹೊರಬರಲಿದೆ' ಎಂದು ವಿರೇಂದ್ರ ಸಿಂಗ್ ಅವರು ಹೇಳಿದ್ದಾರೆ.
'ಈಗಾಗಲೇ ಸತ್ಯ ಹೊರ ಬಂದಿದ್ದು, ಅದನ್ನು ಕೋರ್ಟ್ ಸಹ ಗಮನಿಸಿದೆ. ಇದು ದೇಶದ್ರೋಹದ ಪ್ರಕರಣ ಅಲ್ಲ' ಎಂದು ಸಿಂಗ್ ತಿಳಿಸಿದ್ದಾರೆ.
ಕಳೆದ ಮಂಗಳವಾರ ವಿರೇಂದ್ರ ಸಿಂಗ್ ಅವರಿಗೆ ಜಾಮೀನು ನೀಡಲು ನಿರಾಕರಿಸಿದ್ದ ಕೋರ್ಟ್, ಇದು ಮೇಲ್ನೋಟಕ್ಕೆ ದೇಶದ್ರೋಹದ ಪ್ರಕರಣ ಆಗುವುದಿಲ್ಲ. ಆದರೆ ಇದೊಂದು ಗಂಭೀರ ಪ್ರಕರಣವಾಗಿದ್ದು, ಸಂಪೂರ್ಣ ತನಿಖೆಯ ಮತ್ತು ಆರೋಪಿಯ ಸಹಕಾರದ ಅಗತ್ಯ ಇದೆ ಎಂದು ಹೇಳಿತ್ತು.
ಸಿಂಗ್ ಅವರು ಜಾಟ್ ಚಳುವಳಿಗೆ ಪ್ರಚೋದನೆ ನೀಡಿದ ಆರೋಪ ಎದುರಿಸುತ್ತಿದ್ದು, ಈ ಸಂಬಂಧ ವಿಶೇಷ ತನಿಖಾ ತಂಡ ಅವರ ವಿರುದ್ಧ ಎಫ್ಐಆರ್ ದಾಖಲಿಸಿದೆ. ಆದರೆ ವಿಚಾರಣೆಗೆ ಹಾಜರಾಗದ ವಿರೇಂದ್ರ ಸಿಂಗ್ ಅವರ ವಿರುದ್ಧ ಕಳೆದ ಫೆಬ್ರವರಿ 29ರಂದು ಕೋರ್ಟ್ ಬಂಧನ ವಾರಂಟ್ ಜಾರಿ ಮಾಡಿತ್ತು.
ಈ ಮಧ್ಯೆ, ಜಾಟ್ ಮೀಸಲಾತಿ ಬೇಡಿಕೆಯನ್ನು ಪರಿಗಣಿಸಲು ಹರಿಯಾಣ ಸರಕಾರಕ್ಕೆ ನೀಡಲಾಗಿರುವ 72 ತಾಸುಗಳ ಗಡುವು ಇಂದು ಅಂತ್ಯವಾಗಿದ್ದು, ಹರಿಯಾಣದಲ್ಲಿನ ಕೆಲವೊಂದು ಸೂಕ್ಷ್ಮ ಪಟ್ಟಣಗಳಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದೆ.
ಇಂದು ಗುರವಾರದೊಳಗೆ ತಮ್ಮ ಮೀಸಲಾತಿ ಬೇಡಿಕೆಯನ್ನು ಬಿಜೆಪಿ ನೇತೃತ್ವದ ಹರಿಯಾಣ ಸರಕಾರ ಈಡೇರಿಸದಿದ್ದರೆ ಮೀಸಲಾತಿ ಆಂದೋಲನವನ್ನು ಮತ್ತೆ ಆರಂಭಿಸುವುದಾಗಿ ಜಾಟ್ ನಾಯಕರು ಬೆದರಿಕೆ ಹಾಕಿದ್ದಾರೆ.