'ಶಕ್ತಿಮಾನ್' ಕುದುರೆಯ ಕಾಲು ಮುರಿದ ಬಿಜೆಪಿ ಶಾಸಕ ಬಂಧನ

ಪೊಲೀಸ್ ಕುದುರೆ ಶಕ್ತಿಮಾನ್‌ಗೆ ಹೊಡೆದು ಅದರ ಕಾಲು ಮುರಿದ ಬಿಜೆಪಿ ಶಾಸಕ ಗಣೇಶ್ ಜೋಷಿಯವರನ್ನು ಶುಕ್ರವಾರ ಬಂಧಿಸಲಾಗಿದೆ. ಮುಸ್ಸೂರಿ ಶಾಸಕರಾಗಿರುವ ಗಣೇಶ್ ಜೋಷಿ...
ಕುದುರೆ ಮೇಲೆ ಹಲ್ಲೆ ನಡೆಸುತ್ತಿರುವ ಶಾಸಕ (ಕೃಪೆ: ಎಎನ್ಐ)
ಕುದುರೆ ಮೇಲೆ ಹಲ್ಲೆ ನಡೆಸುತ್ತಿರುವ ಶಾಸಕ (ಕೃಪೆ: ಎಎನ್ಐ)
ಡೆಹ್ರಾಡೂನ್: ಪೊಲೀಸ್ ಕುದುರೆ ಶಕ್ತಿಮಾನ್‌ಗೆ ಹೊಡೆದು ಅದರ ಕಾಲು ಮುರಿದ ಬಿಜೆಪಿ ಶಾಸಕ ಗಣೇಶ್ ಜೋಷಿಯವರನ್ನು ಶುಕ್ರವಾರ ಬಂಧಿಸಲಾಗಿದೆ. ಮುಸ್ಸೂರಿ ಶಾಸಕರಾಗಿರುವ ಗಣೇಶ್ ಜೋಷಿ ಮತ್ತು ಅವರ ಸಹ ಕಾರ್ಯಕರ್ತರು ಮಾರ್ಚ್ 14 ರಂದು ಮುಖ್ಯಮಂತ್ರಿ ವಿರುದ್ಧ ನಡೆಸಿದ ಪ್ರತಿಭಟನೆ ವೇಳೆ ಪೊಲೀಸ್ ಪಡೆಯ ಕುದುರೆ ಮೇಲೆ ಲಾಠಿಯಿಂದ ಹಲ್ಲೆ ನಡೆಸಿದ್ದರು.
ಜೋಷಿಯವರ ಹೊಡೆತಕ್ಕೆ ಕುದುರೆಯ ಕಾಲು ಮುರಿದಿದ್ದು, ಈಗ ಕೃತಕ ಕಾಲನ್ನು ಜೋಡಿಸಲಾಗಿದೆ. ಈ ಕೃತ್ಯವನ್ನು ಕಾಂಗ್ರೆಸ್ ಖಂಡಿಸಿದ್ದು, ಮೂಕ ಪ್ರಾಣಿಗೆ ಹೊಡೆದ ಶಾಸಕನನ್ನು ತರಾಟೆಗೆ ತೆಗೆದುಕೊಂಡಿತ್ತು.
ಉತ್ತರಾಖಂಡ್ ಪೊಲೀಸ್ ಪಡೆಯಲ್ಲಿರುವ ಶಕ್ತಿಮಾನ್‌ನ ಕಾಲಿನಲ್ಲಿ ರಕ್ತ ಸಂಚಾರ ಸ್ಥಗಿತಗೊಂಡ ಕಾರಣ ಗುರುವಾರ ರಾತ್ರಿ ಕಾಲನ್ನು ಶಸ್ತ್ರಚಿಕಿತ್ಸೆ ಮೂಲಕ ಬೇರ್ಪಡಿಸಲಾಗಿತ್ತು. ಕಾಲಿನಲ್ಲಿ ಗಾಯ ದೊಡ್ಡದಾಗಿದ್ದು, ಶುಕ್ರವಾರಕ್ಕೆ ಮುನ್ನ ಕಾಲು ತುಂಡರಿಸಿ ತೆಗೆಯದೇ ಇರುತ್ತಿದ್ದರೆ ಕುದುರೆ ಸಾವನ್ನಪ್ಪುತ್ತಿತ್ತು. ಕುದುರೆಯ ಪ್ರಾಣವನ್ನು ರಕ್ಷಿಸುವ ಸಲುವಾಗಿ ಅದರ ಕಾಲು ತುಂಡರಿಸಿ ಕೃತಕ ಕಾಲಿನ ಜೋಡಣೆ ಮಾಡಲಾಗಿದೆ. ಇದೀಗ ಕುದುರೆ ಆಹಾರ ಸೇವಿಸುವಷ್ಟು ಶಕ್ತವಾಗಿದೆ ಎಂದು ವೈದ್ಯರು ಹೇಳಿದ್ದಾರೆ.
ಅದೇ ವೇಳೆ  ಗಣೇಶ್ ಜೋಷಿಯವರು ನಿನ್ನೆ ಕುದುರೆಯನ್ನು ನೋಡಲು ಹೋಗಿದ್ದರು. ಮಾನವೀಯತೆಯ ನೆಲೆಯಲ್ಲಿ ನಾನು ಕುದುರೆಯನ್ನು ನೋಡಲು ಹೋಗಿದ್ದೆ. ನಾನು ಕುದುರೆಯ ಮೇಲೆ ಹಲ್ಲೆ ನಡೆಸಿಲ್ಲ, ಆದರೆ ಸಾಧುವಾದ ಒಂದು ಪ್ರಾಣಿ ಅಲ್ಲಿ ಒದ್ದಾಡುತ್ತಿರುವುದನ್ನು ನೋಡಲು ಸಾಧ್ಯವಾಗುತ್ತಿಲ್ಲ ಎಂದು ಜೋಷಿ ಹೇಳಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com