ನವದೆಹಲಿ: ಉತ್ತರಾಖಂಡದಲ್ಲಿ ಹೊಸ ಸರ್ಕಾರದ ರಚನೆಗಾಗಿ ಚುನಾವಣೆ ಎದುರಿಸಲು ಸಿದ್ಧ ಎಂದು ಬಿಜೆಪಿ ನಾಯಕ ಕೈಲಾಶ್ ವಿಜಯವರ್ಗೀಯ ಹೇಳಿದ್ದಾರೆ.
ಕಾಂಗ್ರೆಸ್ ನ ಹರೀಶ್ ರಾವತ್ ನೇತೃತ್ವದ ಸರ್ಕಾರ ಬಹುಮತ ಕಳೆದುಕೊಂಡಿದೆ. ಹಾಗಾಗಿ, ಹೊಸ ಸರ್ಕಾರ ರಚನೆಯಾಗಬೇಕಿದೆ ಎಂದು ಅವರು ಹೇಳಿದ್ದಾರೆ.
ಹೊಸ ಸರ್ಕಾರದ ರಚನೆಗಾಗಿ ಬಿಜೆಪಿ ಚುನಾವಣೆ ಎದುರಿಸಲು ಸಿದ್ಧವಿದೆ. ಈ ಸಂಬಂಧ ಉತ್ತರಾಖಂಡದ 35 ಶಾಸಕರು ಬಿಜೆಪಿ ಅಧ್ಯಕ್ಷರನ್ನು ಇಂದು ಭೇಟಿ ಮಾಡಿ ಚರ್ಚೆ ನಡೆಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಈಗಾಗಲೇ ರಾಜ್ಯಪಾಲರನ್ನು ಭೇಟಿ ಮಾಡಿ ಹೊಸ ಸರ್ಕಾರ ರಚನೆ ಕುರಿತು ಮಾತುಕತೆ ನಡೆಸಲಾಗಿದೆ. ಈ ಸಂಬಂಧ ಅವರು, ಸರ್ಕಾರದ ವರದಿ ಕೇಳಿದ್ದಾರೆ ಎಂದು ಕೈಲಾಶ್ ತಿಳಿಸಿದ್ದಾರೆ.
ಭಿನ್ನಮತೀಯ ಕಾಂಗ್ರೆಸ್ ಶಾಸಕರನ್ನು ಸೆಳೆದು ಮುಖ್ಯಮಂತ್ರಿ ಹರೀಶ್ ರಾವತ್ ನೇತೃತ್ವದ ಸರಕಾರವನ್ನು ಅಸ್ಥಿರಗೊಳಿಸುವ ಬಿಜೆಪಿ ಪ್ರಯತ್ನ ನಡೆಸಿದೆ ಎಂಬ ಆರೋಪವನ್ನು ಅವರು ತಳ್ಳಿಹಾಕಿದ್ದಾರೆ.
70 ಸದಸ್ಯ ಬಲದ ಉತ್ತರಾಖಂಡ ವಿಧಾನಸಭೆಯಲ್ಲಿ ಕಾಂಗ್ರೆಸ್ 36, ಬಿಜೆಪಿ 28 ಶಾಸಕರನ್ನು ಹೊಂದಿದೆ. ಪಿಡಿಎಫ್ ಮೈತ್ರಿಕೂಟ 6 ಸದಸ್ಯರನ್ನು ಹೊಂದಿದೆ.