18 ದಿನಗಳ ಮುಷ್ಕರ ನಿಲ್ಲಿಸಿದ ಆಭರಣ ವ್ಯಾಪಾರಿಗಳು

ಚಿನ್ನಾಭರಣ ಉದ್ಯಮವನ್ನು ಅಬಕಾರಿ ಸುಂಕದ ವ್ಯಾಪ್ತಿಗೆ ಒಳಪಡಿಸಿರುವುದನ್ನು ಖಂಡಿಸಿ ಆಭರಣ ಮಾರಾಟಗಾರರು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮುಂಬೈ: ಚಿನ್ನಾಭರಣ ಉದ್ಯಮವನ್ನು ಅಬಕಾರಿ ಸುಂಕದ ವ್ಯಾಪ್ತಿಗೆ ಒಳಪಡಿಸಿರುವುದನ್ನು ಖಂಡಿಸಿ ಆಭರಣ ಮಾರಾಟಗಾರರು ನಡೆಸುತ್ತಿದ್ದ ಅನಿರ್ದಿಷ್ಟಾವಧಿ ಮುಷ್ಕರ 18 ದಿನಗಳ ನಂತರ ನಿನ್ನೆ ಮುಕ್ತಾಯಗೊಂಡಿದೆ.

ಅಬಕಾರಿ ಸುಂಕದ ಅಧಿಕಾರಿಗಳಿಂದ ಯಾವುದೇ ಕಿರುಕುಳ ನೀಡುವುದಿಲ್ಲ ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿಯವರು ಭರವಸೆ ನೀಡಿದ ನಂತರ ಆಭರಣ ಮಾರಾಟಗಾರರು ಮುಷ್ಕರವನ್ನು ಹಿಂಪಡೆದಿದ್ದಾರೆ.

ಪ್ರಮುಖ ಆಭರಣ ಮಾರಾಟದ ಸಂಘಟನೆಗಳಾದ ಜೆಮ್ಸ್ ಮತ್ತು ಜ್ಯುವೆಲ್ಲರಿ ಮಾರಾಟ ಒಕ್ಕೂಟ, ಭಾರತ ಬೆಳ್ಳಿ ಮತ್ತು ಆಭರಣ ಅಸೋಸಿಯೇಷನ್, ಜೆಮ್ಸ್ ಜಿವೆಲ್ಲರಿ ರಫ್ತು ಅಭಿವೃದ್ಧಿ ಸಮಿತಿ ಹಣಕಾಸು ಸಚಿವರೊಂದಿಗೆ ಮಾತುಕತೆ ನಡೆಸಿದ ಬಳಿಕ ತಮ್ಮ ಮುಷ್ಕರವನ್ನು ಹಿಂತೆಗೆದುಕೊಂಡವು.

ಮೊನ್ನೆಯ ಬಜೆಟ್ ನಲ್ಲಿ ಆಭರಣಗಳ ಮೇಲೆ ಶೇಕಡಾ 1ರಷ್ಟು ಅಬಕಾರಿ ಸುಂಕ ವಿಧಿಸಲಾಗಿತ್ತು. ಸರ್ಕಾರ ಈಗ ಕೂಡ ಸುಂಕವನ್ನು ಹಿಂತೆಗೆದುಕೊಂಡಿಲ್ಲ. ಆದರೆ ನಮ್ಮ ಸಮಸ್ಯೆಗಳನ್ನು ಪರಿಹರಿಸುವುದಾಗಿ ಭರವಸೆ ನೀಡಿದ್ದಾರೆ. ಸುದೀರ್ಘ ಮಾತುಕತೆ ಬಳಿಕ ಮುಷ್ಕರವನ್ನು ಹಿಂತೆಗೆದುಕೊಳ್ಳಲು ತೀರ್ಮಾನಿಸಿದ್ದೇವೆ ಎಂದು ಜೆಮ್ಸ್ ಅಂಡ್ ಜ್ಯುವೆಲ್ಲರಿ ಫೆಡರೇಶನ್ ಅಧ್ಯಕ್ಷ ಶ್ರೀಧರ್ ಜಿ.ವಿ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಕಳೆದ 18 ದಿನಗಳ ಮುಷ್ಕರದಿಂದ ಸುಮಾರು 25 ಸಾವಿರ ಕೋಟಿ ರೂಪಾಯಿ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಮಾರ್ಚ್ 2ರಿಂದ ದೇಶಾದ್ಯಂತ 3 ಲಕ್ಷಕ್ಕೂ ಅಧಿಕ ಆಭರಣ ಮಾರಾಟಗಾರರು ಮತ್ತು 300ಕ್ಕೂ ಅಧಿಕ ಸಂಘಟನೆಗಳು ತಮ್ಮ ವ್ಯಾಪಾರ, ವಹಿವಾಟುಗಳನ್ನು ಸ್ಥಗಿತಗೊಳಿಸಿ ಮುಷ್ಕರ ನಡೆಸಿದ್ದರು. ಅವರು ಮೊನ್ನೆ ಹಣಕಾಸು ಸಚಿವರು ಮಂಡಿಸಿದ್ದ ಬಜೆಟ್ ನಲ್ಲಿ ಆಭರಣಗಳ ಮೇಲೆ ಶೇಕಡಾ 1ರಷ್ಟು ಅಬಕಾರಿ ಸುಂಕ ಹೇರಿಕೆಯನ್ನು ವಿರೋಧಸಿ ಮತ್ತು 2 ಲಕ್ಷಕ್ಕಿಂತ ಹೆಚ್ಚು ಆಭರಣ ಖರೀದಿಸಿದ ಗ್ರಾಹಕರು ಪ್ಯಾನ್ ನಂಬರ್ ನ್ನು ಕಡ್ಡಾಯವಾಗಿ ನೀಡಬೇಕೆಂಬ ನಿಯಮವನ್ನು ವಿರೋಧಿಸಿ ಮುಷ್ಕರ ನಡೆಸುತ್ತಿದ್ದರು.

ಆಭರಣ ಮತ್ತು ರತ್ನಗಳ ಉದ್ಯಮ 3.15 ಲಕ್ಷ ಕೋಟಿಯವರೆಗೆ ಅಭಿವೃದ್ಧಿ ಹೊಂದಿದ್ದು, ದೇಶದ ಒಟ್ಟಾರೆ ಬೆಳವಣಿಗೆಯ ಶೇಕಡಾ 3.5ರಷ್ಟು ಆಭರಣ ಉದ್ಯಮದ ಕೊಡುಗೆಯಿದೆ. ಈ ಉದ್ಯಮದಲ್ಲಿ 4.5 ದಶಲಕ್ಷ ಕುಶಲ ಕರ್ಮಿಗಳು ಕೆಲಸ ಮಾಡುತ್ತಿದ್ದಾರೆ. ಆದರೂ ಇದು ಅಸಂಘಟಿತ ವಲಯವಾಗಿ ಉಳಿದುಕೊಂಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com