
ಲಖನೌ: 2013 ರಲ್ಲಿ ಉತ್ತರ ಪ್ರದೇಶದಲ್ಲಿ ನಡೆದಿದ್ದ ಕೋಮು ಗಲಭೆ ಪ್ರಕರಣದ ಬಗ್ಗೆ ನ್ಯಾ.ವಿಷ್ಣು ಸಹಾಯ್ ನೀಡಿದ್ದ ವರದಿಯನ್ನು ಉತ್ತರ ಪ್ರದೇಶದ ಐಪಿಎಸ್ ಅಸೋಸಿಯೇಷನ್ ತಿರಸ್ಕರಿಸಿದೆ.
ನ್ಯಾ.ವಿಷ್ಣು ಸಹಾಯ್ ವರದಿಯಲ್ಲಿ ಗಲಭೆಗೆ ಸಂಬಂಧಿಸಿದಂತೆ ಮಾಜಿ ಎಸ್ಎಸ್ ಪಿ ಸುಭಾಷ್ ದುಬೆ ಅವರನ್ನು ದೂರಲಾಗಿತ್ತು. ವರದಿಯ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಂಘಟನೆಯ ಕಾರ್ಯದರ್ಶಿ ಐಜಿ ಪ್ರಕಾಶ್, : ಐಪಿಎಸ್ ಅಸೋಸಿಯೇಷನ್ ವಿಷ್ಣು ಸಹಾಯ್ ವರದಿಯನ್ನು ಒಪ್ಪುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಮುಜಫರ್ ನಗರದಲ್ಲಿ ಗಲಭೆ ಸಂಭವಿಸಿದಾಗ ಎಸ್ಎಸ್ ಪಿ ಸುಭಾಶ್ ದುಬೆ ಅವರನ್ನು ಕೇವಲ 12 ದಿನಗಳ ವರೆಗೆ ಮಾತ್ರ ಮುಜಫರ್ ನಗರದ ಉಸ್ತುವಾರಿಯನ್ನಾಗಿ ನೇಮಕ ಮಾಡಲಾಗಿತ್ತು. ಘಟನೆಗೆ ಸಂಬಂಧಿಸಿದಂತೆ ಸುಭಾಶ್ ದುಬೆ 27 ಪುಟಗಳ ವರದಿಯನ್ನು ನೀಡಿದ್ದರು ಅದರ ಒಂದೇ ಒಂದು ಸಾಲನ್ನು ನ್ಯಾ.ವಿಷ್ಣು ಸಹಾಯ್ ವರದಿಯಲ್ಲಿ ಸೇರಿಸಲಾಗಿಲ್ಲ ಎಂದು ಐಪಿಎಸ್ ಅಸೋಸಿಯೇಷನ್ ತಿಳಿಸಿದೆ.
ರಾಜ್ಯ ಸರ್ಕಾರ ಗಲಭೆ ಪ್ರಕರಣದಲ್ಲಿ ಸುಭಾಷ್ ದುಬೆ ಅವರನ್ನು ಬಲಿಪಶು ಮಾಡಲು ಹೊರಟಿದೆ ಎಂದು ರಾಜ್ಯ ಪೊಲೀಸ್ ಅಧಿಕಾರಿಗಳ ಸಂಘಟನೆ ಸರ್ಕಾರದ ವಿರುದ್ಧ ಆರೋಪ ಮಾಡಿದೆ. ಸುಭಾಷ್ ದುಬೆ ಅವರೊಂದಿಗೆ ಸ್ಥಳೀಯ ಗುಪ್ತಚರ ಇಲಾಖೆ ಇನ್ಸ್ ಪೆಕ್ಟರ್ ಪ್ರಬಾಲ್ ಪ್ರತಾಪ್ ಸಿಂಗ್ ಅವರನ್ನೂ ಐಪಿಎಸ್ ಸಂಘ ಸಮರ್ಥಿಸಿಕೊಂಡಿದೆ.
ಐಪಿಎಸ್ ಅಸೋಸಿಯೇಶನ್ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಡಿಐಜಿ ಡಿ.ಕೆ ಚೌಧರಿಯ ಅಮಾನತು ಆದೇಶವನ್ನು ಖಂಡಿಸಿ ಅಮಾನತು ಆದೇಶವನ್ನು ವಾಪಸ್ ಪಡೆಯುವಂತೆ ಸರ್ಕಾರದ ಮೇಲೆ ಒತ್ತಡ ಹೇರಿತ್ತು.
Advertisement