

ನವದೆಹಲಿ: ಅಸಾವುದ್ದೀನ್ ಒವೈಸಿ ಹೇಳಿಕೆ ನಂತರ ಭಾರತ್ ಮಾತಾ ಕಿ ಜೈ ಘೋಷಣೆ ರಾಷ್ಟ್ರೀಯತೆ ನಿರ್ಧರಿಸುವ ಮಾನದಂಡವೇ ಎಂಬ ಪ್ರಶ್ನೆ ಉದ್ಭವಿಸಿದ್ದು, ಈ ಬಗ್ಗೆ ಕಾಂಗ್ರೆಸ್ ನಾಯಕ ಶಶಿ ತರೂರ್ ಬಿಜೆಪಿಯನ್ನು ಪ್ರಶ್ನಿಸಿದ್ದಾರೆ.
ಜೆಎನ್ ಯು ವಿವಿಯಲ್ಲಿ ಆಯೋಜಿಸಲಾಗಿದ್ದ ಜೆಎನ್ ಯು ಹಾಗೂ ರಾಷ್ಟ್ರೀಯತೆ ಕುರಿತ ಕಾರ್ಯಕ್ರಮದಲ್ಲಿ ಮಾತನಾಡಿರುವ ಶಶಿ ತರೂರ್, ಇತೀಚೆಗೆ ರಾಷ್ಟ್ರೀಯತೆ ಎಂಬುದು ಭಾರತ್ ಮಾತಾ ಕಿ ಜೈ ಎಂದು ಹೇಳುತ್ತೇವೋ ಇಲ್ಲವೋ ಎಂಬುದರ ಮೇಲೆ ನಿರ್ಧಾರವಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ರಾಷ್ಟ್ರೀಯತೆಯನ್ನು ಭಾರತ್ ಮಾತಾ ಕಿ ಜೈ ಎಂಬ ಘೋಷಣೆ ಕೂಗುವುದರ ಮೇಲೆ ನಿರ್ಧರಿಸಲಾಗುತ್ತಿದೆ, ಭಾರತ್ ಮಾತಾ ಕಿ ಜೈ ಎಂದು ಹೇಳಲು ನನಗೆ ಸಂತೋಷವಾಗುತ್ತದೆ. ಆದರೆ ಇತರರನ್ನು ಆ ಘೋಷಣೆ ಕೂಗುವಂತೆ ಒತ್ತಾಯ ಮಾಡಬೇಕಾ ಎಂದು ಶಶಿ ತರೂರ್ ಪ್ರಶ್ನಿಸಿದ್ದಾರೆ.
ತಾವು ನಂಬುವುದನ್ನು ಆರಿಸಿಕೊಳ್ಳಲು ಜನರಿಗೆ ಹಕ್ಕಿದೆ. ಅಂತೆಯೇ ಪ್ರಜಾಪ್ರಭುತ್ವದಲ್ಲಿ ಇತರರ ಚಿಂತನೆಗಳ ಬಗ್ಗೆ ಸಹಿಷ್ಣುಗಳಾಗಿರಬೇಕಾಗುತ್ತದೆ ಸಂವಿಧಾನದಲ್ಲಿ ಭಾರತ್ ಮಾತಾ ಕಿ ಜೈ ಎಂದು ಹೇಳಲು ಹಕ್ಕು ನೀಡಲಾಗಿದೆಯೋ ಹೇಳದೇ ಇರುವುದಕ್ಕೂ ಅದೇ ಹಕ್ಕು ನೀಡಲಾಗಿದೆ, ಯಾವಾಗ ಹೇಳಬೇಕು ಎಂಬುದು ನನ್ನ ಆಯ್ಕೆ ಅದೇ ಪ್ರಜಾಪ್ರಭುತ್ವ ಎಂದು ತರೂರ್ ಅಭಿಪ್ರಾಯಪಟ್ಟಿದ್ದಾರೆ.