
ಹೈದರಾಬಾದ್: ನೆರೆ ದೇಶ ತನ್ನ ಪಡೆಯನ್ನು ಸಜ್ಜುಗೊಳಿಸುತ್ತಿದ್ದು, ಅಂತಾರಾಷ್ಟ್ರೀಯ ಸಂಬಂಧಗಳ ಘಟಕಗಳ(ಎನ್ ಎಸ್ ಎ) ನೆರವಿನೊಂದಿಗೆ ಪರೋಕ್ಷ ಯುದ್ಧಗಳಲ್ಲಿ ತೊಡಗಿರುವುದರಿಂದ ಗಡಿಭಾಗಗಳಲ್ಲಿ ತೀವ್ರ ಎಚ್ಚರಿಕೆಯಿಂದಿರಬೇಕೆಂದು ಸೇನಾ ಮುಖ್ಯಸ್ಥ ಜನರಲ್ ದಲ್ಬೀರ್ ಸಿಂಗ್ ಒತ್ತಿ ಹೇಳಿದ್ದಾರೆ.
ನೆರೆ ದೇಶ ಪರೋಕ್ಷ ಯುದ್ಧಗಳಲ್ಲಿ ತೊಡಗುವುದರಿಂದ ನಾವು ನಮ್ಮ ಸೇನೆಯನ್ನು ಸಜ್ಜುಗೊಳಿಸಬೇಕಾಗಿದೆ ಮತ್ತು ಗಡಿ ಭಾಗದಲ್ಲಿ ಕಣ್ಗಾವಲು ಇರಿಸಬೇಕಾಗಿದೆ ಎಂದು ಸೇನಾ ಮುಖ್ಯಸ್ಥರು ತಿಳಿಸಿರುವುದಾಗಿ ಹೇಳಿಕೆಯೊಂದನ್ನು ಬಿಡುಗಡೆ ಮಾಡಲಾಗಿದೆ.
ಯಾವ ದೇಶ ಯುದ್ಧಕ್ಕೆ ಸಜ್ಜು ನಡೆಸುತ್ತಿದೆ ಎಂಬುದನ್ನು ಸೇನಾ ಮೂಲಗಳು ಬಹಿರಂಗಪಡಿಸಿಲ್ಲ.
ಸಿಕಂದರಾಬಾದ್ ನಲ್ಲಿ ಇಂದು ದಲ್ಬೀರ್ ಸಿಂಗ್ ಅವರು ರಕ್ಷಣಾ ನಿರ್ವಹಣೆ ಕಾಲೇಜಿನ ಕಾರ್ಯಕ್ರಮವೊಂದರ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ಈಶಾನ್ಯ ರಾಜ್ಯಗಳಲ್ಲಿ ಮತ್ತು ನಮ್ಮ ದೇಶದ ಕೆಲವು ಭಾಗಗಳಲ್ಲಿ ಹಿಂಸಾಚಾರ ಕಡಿಮೆಯಾಗಿದೆ. ಜನರು ಶಾಂತಿಯಿಂದ ಬದುಕಲು ಬಯಸುತ್ತಾರೆ ಎಂದರು.
ಭಾರತೀಯ ಸೇನೆಯ ಆಧುನೀಕರಣಗೊಳಿಸುವ ಕಾರ್ಯ ವೇಗವಾಗಿ ನಡೆಯುತ್ತಿದ್ದು, ಹಳೆಯ ಯಂತ್ರೋಪಕರಣಗಳು ಮತ್ತು ಉಪಕರಣಗಳನ್ನು ಬದಲಿಸುವ ಪ್ರಯತ್ನ ನಡೆಯುತ್ತಿದೆ. ಸಂಕೀರ್ಣತೆ ಮತ್ತು ಅನಿಶ್ಚಿತತೆಯಿಂದಾಗಿ ದೇಶದ ಭದ್ರತೆ ಬಹುದೊಡ್ಡ ಸವಾಲಾಗಿದೆ ಎಂದು ಹೇಳಿದರು.
Advertisement