ಡೆಹ್ರಾಡೂನ್: ಉತ್ತರಾಖಂಡ್ ಮುಖ್ಯಮಂತ್ರಿ ಹರಿಶ್ ರಾವತ್ ಅವರು ಕುದುರೆ ವ್ಯಾಪಾರ ನಡೆಸುತ್ತಿದ್ದಾರೆ ಎಂದು ಬಂಡಾಯ ಕಾಂಗ್ರೆಸ್ ಶಾಸಕರು ಆರೋಪಿಸಿದ್ದಾರೆ. ಆದರೆ ಈ ಆರೋಪವನ್ನು ತಳ್ಳಿಹಾಕಿರುವ ರಾವತ್, ನನ್ನ ವಿರುದ್ಧ ಸುಳ್ಳು ಆರೋಪ ಮಾಡಲಾಗುತ್ತಿದೆ ಮತ್ತು ಈ ಸಂಬಂಧ ಬಿಡುಗಡೆಯಾಗಿರುವ ಸಿಡಿ ನಕಲಿ ಎಂದು ಶನಿವಾರ ಹೇಳಿದ್ದಾರೆ.
ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಹರಿಶ್ ರಾವತ್, ತಮ್ಮ ವಿರುದ್ಧದ ಕುಟುಕು ಕಾರ್ಯಾಚರಣೆ ರಾಜಕೀಯ ಪಿತೂರಿಯಾಗಿದ್ದು, ನನ್ನ ಗೌರವಕ್ಕೆ ಧಕ್ಕೆ ತರಲು ಈ ಸಿಡಿ ಬಿಡುಗಡೆ ಮಾಡಿದ್ದಾರೆ ಎಂಬುದು ಎಲ್ಲರಿಗೂ ಸ್ಪಷ್ಟವಾಗುತ್ತದೆ ಎಂದರು.
ಸ್ಥಳೀಯ ವಾಹಿನಿಯೊಂದರ ಮಾಲೀಕರು ನಡೆಸಿದ ಕುಟುಕು ಕಾರ್ಯಾಚರಣೆಯ ಸಿಡಿಯನ್ನು ಬಂಡಾಯ ಕಾಂಗ್ರೆಸ್ ಶಾಸಕರು ಬಿಡುಗಡೆ ಮಾಡಿದ್ದರು. ಅಲ್ಲದೆ ರಾವತ್ ಅವರು ತಮ್ಮ ಸರ್ಕಾರ ಉಳಿಸಿಕೊಳ್ಳಲು ಕುದುರೆ ವ್ಯಾಪಾರ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದರು.
ಮಾರ್ಚ್ 23ರಂದು ಈ ಕುಟುಕು ಕಾರ್ಯಾಚರಣೆ ನಡೆಸಲಾಗಿದ್ದು, ಅದರಲ್ಲಿ ಸಿಎಂ ಹರಿಶ್ ರಾವತ್ ಅವರು ಬಂಡಾಯ ಶಾಸಕರನ್ನು ಖರೀದಿಸುವ ಬಗ್ಗೆ ಮಾತನಾಡಿದ್ದಾರೆ ಎಂದು ಆರೋಪಿಸಿಲಾಗಿದೆ.