
ನವದೆಹಲಿ: ಜಮ್ಮು-ಕಾಶ್ಮೀರದಲ್ಲಿ ಬಿಜೆಪಿ-ಪಿಡಿಪಿ ಸರ್ಕಾರ ರಚನೆ ಖಾತ್ರಿಯಾಗುತ್ತಿದ್ದಂತೆಯೇ ಬಿಜೆಪಿ-ಪಿಡಿಪಿ ಮೈತ್ರಿ ಅಫ್ಜಲ್ ಗುರು ವಿಷಯದಲ್ಲಿ ನಿಲುವನ್ನು ಸ್ಪಷ್ಟಪಡಿಸಬೇಕೆಂದು ಕಾಂಗ್ರೆಸ್ ಪಕ್ಷ ಒತ್ತಾಯಿಸಿದೆ.
ಸಂಸತ್ ಮೇಲೆ ದಾಳಿ ನಡೆಸಿದ ಉಗ್ರ ಅಫ್ಜಲ್ ಗುರುಗೆ ಗಲ್ಲು ಶಿಕ್ಷೆ ವಿಧಿಸಿದ್ದನ್ನು ಪಿಡಿಪಿ ಪಕ್ಷ ಖಂಡಿಸಿತ್ತು. ಆದರೆ ಬಿಜೆಪಿ ಈಗ ಪಿಡಿಪಿಯೊಂದಿಗೆ ಮೈತ್ರಿಗೆ ಮುಂದಾಗಿರುವುದರಿಂದ ಅಫ್ಜಲ್ ಗುರು ವಿಷಯದಲ್ಲಿ ಬಿಜೆಪಿ ಹಾಗೂ ಪಿಡಿಪಿ ಎರಡೂ ಪಕ್ಷಗಳು ತಮ್ಮ ನಿಲುವನ್ನು ಸ್ಪಷ್ಟಪಡಿಸಬೇಕೆಂದು ಕಾಂಗ್ರೆಸ್ ವಕ್ತಾರ ರಣ್ ದೀಪ್ ಸುರ್ಜೇವಾಲ ಟ್ವೀಟ್ ಮಾಡಿದ್ದಾರೆ.
ಅಫ್ಜಲ್ ಗುರು ಗಲ್ಲು ಶಿಕ್ಷೆಯನ್ನು ವಿರೋಧಿಸಿದ್ದ ಪಿಡಿಪಿಯೊಂದಿಗೆ ಈಗ ಬಿಜೆಪಿ ಮೈತ್ರಿಗೆ ಮುಂದಾಗಿದೆ, ಹಾಗಾದರೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಈಗ ಯಾರನ್ನು ದೇಶದ್ರೋಹಿ ಎಂದು ಬ್ರಾಂಡ್ ಮಾಡುತ್ತಾರೆ ಎಂದು ಸುರ್ಜೇವಾಲ ಪ್ರಶ್ನಿಸಿದ್ದಾರೆ.
ಜೆಎನ್ ಯು ವಿವಿಯಲ್ಲಿ ದೇಶವಿರೋಧಿ ಘೋಷಣೆ ಕೇಳಿಬಂದಿದ್ದ ಪ್ರಕರಣದಲ್ಲಿ ವಿದ್ಯಾರ್ಥಿ ಸಂಘದ ನಾಯಕ ಕನ್ಹಯ್ಯ ಕುಮಾರ್ ನನ್ನು ಬಂಧಿಸಲಾಗಿತ್ತು, ಕನ್ಹಯ್ಯ ಕುಮಾರ್ ನನ್ನು ಬಂಧಿಸಿದ್ದನ್ನು ವಿರೋಧಿಸಿದ್ದ ಕಾಂಗ್ರೆಸ್, ಬಿಜೆಪಿ ದೇಶದ್ರೋಹದ ಕಾನೂನನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಆರೋಪಿಸಿತ್ತು.
Advertisement