
ನವದೆಹಲಿ: ಜಾಟ್ ಮತ್ತು ಇತರ ನಾಲ್ಕು ಸಮುದಾಯದವರಿಗೆ ಸರ್ಕಾರಿ ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿ ಒದಗಿಸುವ ಹರ್ಯಾಣ ಹಿಂದುಳಿದ ವರ್ಗಗಳ ಮಸೂದೆ-2016ಗೆ ಹರ್ಯಾಣ ವಿಧಾನಸಭೆ ಮಂಗಳವಾರ ಅನುಮೋದನೆ ನೀಡಿದೆ.
ಹರ್ಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಕಟ್ಟರ್ ಮಸೂದೆಯನ್ನು ಸದನದ ಮುಂದೆ ಮಂಡಿಸಿದರು. ಹಿಂದುಳಿದ ವರ್ಗದಲ್ಲೇ ಪ್ರತ್ಯೇಕ ವಿಭಾಗ ಕಲ್ಪಿಸಿ ಅದರ ಮೂಲಕ ಜಾಟ್ ಮತ್ತು ಇತರೆ ನಾಲ್ಕು ಸಮುದಾಯಗಳಿಗೆ ಮೀಸಲು ನೀಡಲು ನಿರ್ಧರಿಸಲಾಗಿದೆ.
ಇದರನ್ವಯ ಶಿಕ್ಷಣದಲ್ಲಿ ಶೇ.10ರಷ್ಟು ಮತ್ತು ಕ್ಲಾಸ್ 3 ಮತ್ತು ಕ್ಲಾಸ್ 4 ಸರ್ಕಾರಿ ಉದ್ಯೋಗಳಲ್ಲಿ ಶೇ.10ರಷ್ಟು ಮೀಸಲಾಗಿದೆ, ಕ್ಲಾಸ್1 ಮತ್ತು ಕ್ಲಾಸ್ 2 ವರ್ಗದಲ್ಲಿ ಶೇ.6ರಷ್ಟು ಮೀಸಲಾಗತಿ ನೀಡಲಾಗುವುದು. ಇದಲ್ಲದೆ ಜಾಟರಿಗೆ ಮೀಸಲು ನೀಡುವುದರ ಜತೆಗೆ ಮತ್ತೂಂದು ಪ್ರತ್ಯೇಕ ಮಸೂದೆಯನ್ನು ಮಂಡಿಸಿ ಶಾಶ್ವತ ಹರ್ಯಾಣ ಹಿಂದುಳಿದ ವರ್ಗಗಳ ಆಯೋಗ ಸ್ಥಾಪಿಸಲು ರಾಜ್ಯ ಸರ್ಕಾರ ಉದ್ದೇಶಿಸಿದೆ.
ಕಳೆದ ಫೆಬ್ರವರಿಯಲ್ಲಿ ಜಾಟ್ ಸಮುದಾಯಕ್ಕೆ ಮೀಸಲಾತಿ ನೀಡಬೇಕೆಂದು ಭಾರೀ ಪ್ರತಿಭಟನೆ ನಡೆದಾಗ ಈ ಬಾರಿಯ ಅಧಿವೇಶನದಲ್ಲಿ ಮಸೂದೆ ಮಂಡಿಸುವುದಾಗಿ ಜಾಟ್ ಸಮುದಾಯಕ್ಕೆ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಭರವಸೆ ನೀಡಿದ್ದರು. ಅದರಂತೆ ಈ ಬಜೆಟ್ ಅಧಿವೇಶನದಲ್ಲಿ ಜಾರಿಗೆ ತರಲಾಗಿದೆ.
ಮೀಸಲು ಬೇಡಿಕೆ ಈಡೇರಿಸುವ ಕುರಿತು ಏ.3ರೊಳಗೆ ಸರ್ಕಾರ ನಿರ್ಧಾರ ಕೈಗೊಳ್ಳಬೇಕು. ಇಲ್ಲದೇ ಹೋದಲ್ಲಿ ಮತ್ತೆ ಹೋರಾಟ ಆರಂಭಿಸುವುದಾಗಿ ಜಾಟ್ ನಾಯಕರು ಎಚ್ಚರಿಸಿದ್ದರು. ಈ ಹಿನ್ನೆಲೆಯಲ್ಲಿ ಸರ್ಕಾರ ತರಾತುರಿಯಲ್ಲಿ ಮಸೂದೆ ಸಿದ್ಧಪಡಿಸಿದ ಅದನ್ನು ಅಂಗೀಕರಿಸಿದೆ.
Advertisement